Showing posts with label guruprasadphotography. Show all posts
Showing posts with label guruprasadphotography. Show all posts

Thursday, October 16, 2025

ಹಸಿರು ಬಾಲದ ಸೂರಕ್ಕಿ-Green-tailed Sunbird.

Green-tailed Sunbird. ಹಸಿರು ಬಾಲದ ಸೂರಕ್ಕಿ

ಸಂಜೆಯ ಸೊಭಗು ....ಸುತ್ತಲೂ ಆವರಿಸಿರುವ ಬೆಟ್ಟಗಳ ಒಂದು ಕಡೆ ಇಂದ ಸೂರಪ್ಪ ನಿದಾನಕ್ಕೆ ಜಾರುವುದಕ್ಕೆ ಅಣಿಯಾಗುತ್ತ ಇದ್ದ . .ಅದಾಗಲೇ ಬೆಟ್ಟಗಳ ಮೇಲೆ ಚಂದಿರ ಮೂಡಿ ಬಂದಾಗಿತ್ತು . .. ಸುತ್ತಲೂ ಬೆಟ್ಟ ಇರುವುದರಿಂದ ಕತ್ತಲು ಬೇಗ ಆಗುತ್ತದೆ ಎಂದು ಉತ್ತರಾಖಂಡ್ ಒಂದು ಚಿಕ್ಕ ಊರು ಮಂಡಲ್ ನ ಕಡಿದಾದ ಕಣಿವೆಯ ದಾರಿಯಲ್ಲಿ ನಮ್ಮ ಹೊಸ ಹೊಸ ಹಕ್ಕಿಗಳ ಹುಡುಕಾಟ ಸಾಗಿತ್ತು . . ಚಳಿಗಾಲದಲ್ಲಿ ಇಲ್ಲಿ ನಮಗೆ ಕಾಣಸಿಗುವುದೆಲ್ಲ ಚಿಕ್ಕ ಚಿಕ್ಕ ತರ ತರ ಬಣ್ಣಗಳಿಂದ ಕೂಡಿದ ಹಕ್ಕಿಗಳು . . ಅದನ್ನು ನೋಡಲು ನಮ್ಮ ಕಣ್ಣು ಚುರುಕು ಆಗಿರಬೇಕು ಅಷ್ಟೇ .  ಗೈಡ್ ಇದ್ದಾರೆ ಸಮಸ್ಯೆ ಇಲ್ಲ . . ನಮ್ಮ ಗೈಡ್ ರಾಹುಲ್ ಸಿಂಗ್ ಚೆನ್ನಾಗಿ ತೋರಿಸುತ್ತ  ನಮ್ಮ ಕುತೂಹಲವನ್ನು ಹೆಚ್ಚಿಸಿದ್ದ . .
ಹಾಗೆ ಕಡಿದಾದ ಕಣಿವೆಯಲ್ಲಿ ಸಾಗುತ್ತ ಇರಬೇಕಾದರೆ ಒಂದು ಸಣ್ಣ ಹಕ್ಕಿ ಒಂದು ಪೊದೆ ಇಂದ ಇನೂಂದು ಪೊದೆ ಹತ್ತಿರ ಹಾರಿತು ... ಒಂದು ಹಳದಿ ಕಲರ್ ಬಾಲ್ ಹೋದ ಹಾಗೆ ಕಾಣಿಸಿತು .  ಆಮೇಲೆ ಸ್ವಲ್ಪ ಹೊತ್ತು ಅಲ್ಲೇ ಕಾದ ಮೇಲೆ ನಿದಾನಕ್ಕೆ ಹೊರಗಡೆ ಬಂದು ಅಕ್ಕ ಪಕ್ಕದ ಗಿಡಗಳ ಮಧ್ಯೆ ಇದ್ದ ಸಣ್ಣ ಸಣ್ಣ ಹುಳ  ಜೇಡ ಇವುಗಳನ್ನು ಹುಡುಕಿ ಹುಡುಕಿ ತಿನ್ನುತ್ತಾ ...ಮುಸ್ಸಂಜೆಯ ಹೊಂಬಿಸಿಲಿಗೆ ತನ್ನ ಹಳದಿ ಮೈಬಣ್ಣ ತೋರಿಸುತ್ತ ಆಟ ಆಡುತ್ತಿತ್ತು . . ಅಬ್ಬಾ ಎಂತಹ ಸೌಂದರ್ಯ ಮೈ ಎಲ್ಲ ಗಾಢ ಹಳದಿ ಬಣ್ಣ ... ಉದ್ದನೆಯ ಕೊಕ್ಕು ತಲೆ ಭಾಗ ನೇರಳೆ ಮಿಶ್ರೀತ ಕಪ್ಪು ಕಂದು ಅದು ಸೂರ್ಯನ ಸಂಜೆ ಬಿಸಿಲಿಗೆ ಮಿರಮಿರ ಹೊಳೆಯುತ್ತ ಇತ್ತು . . ಒಂದು ಹತ್ತು ನಿಮಿಷದ ಸತತ ಪ್ರಯತ್ನದ ಫಲವಾಗಿ ಒಂದೆರಡು ಒಳ್ಳೆಯ ಫೋಟೋ ತೆಗೆಯಲು ಸಿಕ್ಕಿತ್ತು . . ಸಿಕ್ಕಾ ಪಟ್ಟೆ ಚುರುಕು ಹಕ್ಕಿ ಒಂದು ಕ್ಷಣ ಕೂಡ ಒಂದು ಕಡೆ ಕೂರುತ್ತಾ  ಇರಲಿಲ್ಲ . . ನನಗೆ ನಮ್ಮ ಕರ್ನಾಟಕದಲ್ಲಿ ನೋಡಿದ್ದ sunbird (ನೇರಳೆ ಸೂರಕ್ಕಿ , ಸಣ್ಣ ಸೂರಕ್ಕಿ ಹಾಗೆ ಖಗರತ್ನ ) ಇವುಗಳ ನೋಟ ವಿಭಿನ್ನವಾಗಿ ಇತ್ತು . . ಒಟ್ನಲ್ಲಿ ಇನ್ನೊಂದು ಅಪರೂಪದ ಸೂರಕ್ಕಿ ನೋಡಲು ಸಿಕ್ಕಿದ್ದು ಖುಷಿ ಆಯಿತು . .





ಕೆಂಪು ಚಿತ್ತಾರದ ಚಿತ್ರ ಪಕ್ಷಿ -Scarlet Finch

ಕೆಂಪು ಚಿತ್ತಾರದ ಚಿತ್ರ ಪಕ್ಷಿ -Scarlet Finch

 

ಹಿಮಾಲಯದ ತಪ್ಪಲಿನಲ್ಲಿ ತುಂಗನಾಥ್ ಕೆಳಗೆ ಚರ್ದಾಮ್ ಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಪುಟ್ಟ ಊರು ಮಂಡಲ್. ಇಲ್ಲಿನ ಪ್ರಸಿದ್ಧಿ ಚಿಕ್ಕ ಚಿಕ್ಕ ಪಕ್ಷಿಗಳು, ಮತ್ತು ಅವುಗಳ ಕಲರ್ ಕಲರ್ ಬಣ್ಣಗಳು. ಉತ್ತರಕಾಂಡ ಪ್ರವಾಸದ ಐದನೇ ದಿನ ... ಚೋಪ್ತ ವ್ಯಾಲಿ ಮತ್ತೆ ತುಂಗನಾಥ್ ಮೇಲೆ ಹೊಸದಾಗಿ ಬಿದ್ದಿದ್ದ ಹಿಮದ ರಾಶಿಯಲ್ಲಿ ಮಿಂದೆದ್ದು.. ಕೆಲವೊಮ್ಮೆ ರಾತ್ರಿಯಲ್ಲಿ ಚಳಿ ಅದು ಮೈನಸ್ 5 ಡಿಗ್ರಿ ಕೊರೆಯುವ ಚಳಿಯಲ್ಲಿ ರೂಮ್ ಹೀಟರ್ ಇಲ್ಲದಿರ ಗಡಗಡ ನಡುಗಿ ಮಲಗಿದ್ದ ಅನುಭವ ಹೊತ್ತು ಸ್ವಲ್ಪ ಬೆಚ್ಚಗಿದ್ದ ಈ ಊರಿಗೆ ಬಂದಾಗ ಬಿಸಿಲು ನೋಡಿ ಸ್ವಲ್ಪ ಗೆಲುವು ಬಂದಿತ್ತು....

ಇಲ್ಲಿ ಕಾಣ ಸಿಗುವ ಪಕ್ಷಿ ಸಂಕುಲ ಪಟ್ಟಿಯನ್ನು ಒಮ್ಮೆ ನೋಡಿ ಮರುದಿನದ ತಯಾರಿ ಮಾಡಿಕೊಂಡು ಅಣಿಯಾಗಿದ್ದೆವು.. ಡಿಸೆಂಬರ್ ಚುಮು ಚುಮು ಚಳಿಯ ಬೆಳಗಿನ ಜಾವ ಬೇಗನೆ ಎದ್ದು ತಯಾರಾಗಿ ಗೈಡ್ ಜೊತೆ ಹೆಜ್ಜೆ ಹಾಕುತ್ತಾ ಇದ್ದೆವು... ರೋಡ್ ಪಕ್ಕದಲ್ಲೇ ನಮ್ಮನ್ನು ನಿಲ್ಲಿಸಿದ ನಮ್ಮ ಗೈಡ್ ರಾಹುಲ...

ಇನ್ನು ಬೆಳಕು ಆಗಿರಲಿಲ್ಲ... ಕತ್ತಲು ಕತ್ತಲು ಮಬ್ಬು ಹಾಗೆ ಇತ್ತು.. ಸುತ್ತಲೂ ಬೆಟ್ಟಗಳ ಗುಂಪು ಮದ್ಯ ಈ ಹಳ್ಳಿ.... ಸಮಯ 6 ಘಂಟೆ ಸುಮಾರು ಆಗ ನಿಧಾನಕ್ಕೆ ಬೆಳಕು ಬರಲು ಶುರು ಆಗಿತ್ತು.... ನಮ್ಮ ರಾಹುಲ್ ಆ ಸಣ್ಣ ಬೆಳಕಿನಲ್ಲೇ ಬೆನಾಕ್ಯುಲರ್ ಹಿಡಿದು ಯಾವುದೋ ಮರಗಳ ಮೇಲೆ ನೋಡುತ್ತಾ ಇದ್ದ.... ಇದ್ದಕಿದ್ದಂತೆ ನಮಗೆ ಸನ್ನೆ ಮಾಡಿ ಕ್ಯಾಮರಾ ರೆಡಿ ಇಟ್ಕೊಳಕ್ಕೆ ಹೇಳ್ದ...  ಸ್ವಲ್ಪ ಸ್ವಲ್ಪ ಬೆಳಕು ಮೂಡ್ತಾ ಇತ್ತು... ಒಂದೆರಡು ನಿಮಿಷಗಳ ನಂತರ.  ಎದುರಿಗೆ ಕಾಣುತ್ತಾ ಇದ್ದ ಮರದ ಮೇಲೆ ಫೋಕಸ್ ಮಾಡಿ ಇರಿ ಬೇಗ ಅಂದ....  ಅವನಿಗೆ ಯಾವುದೋ ಒಂದು ಪಕ್ಷಿ ಬರುವ ಮುನ್ಸೂಚನೆ ಸಿಕ್ಕಿತ್ತು....ಆದರೆ ನಮ್ಮ ಕಣ್ಣಿಗೆ ಕಾಣಿಸುತ್ತಾ ಇರಲಿಲ್ಲ....  ಇನ್ನೊಂದೆರಡು ನಿಮಿಷಗಳ ನಂತರ... ಹೋ ಬಂತು ಬಂತು... ಉದರ್ ದೇಕೊ ಅಂದ... ಅರೆ ಅರೆ....ನಾನು ಕ್ಯಾಮರಾ ಹಿಡ್ಕೊಂಡು ರೆಡಿ ಆಗಿದ್ದೆ.... ಎಲ್ಲಿತ್ತೋ ಒಂದು ಪುಟ್ಟ ಕೆಂಪು ಪಕ್ಷಿಗಳ ಗುಂಪು... ಸರ್ರ್ ಸರ್ರ್  ಎಂದು ಹಾರಿ ಬಂದು ನಮ್ಮ ಎದುರಿಗಿದ್ದ ಮರಗಳ ಮೇಲೆ ಬಂದು ಕೂತಿತು... ಸುಮಾರು ಪಕ್ಷಿ ಗಳು ಇದ್ದವು.... ಅದು ಚಿತ್ರ ಪಕ್ಷಿ (scarlet finch) ಮೊದಲ ಬಾರಿ ಅದನ್ನು ನೋಡ್ತಾ  ಇದ್ದದ್ದು ಸೊ ನನ್ನ ಕುತೂಹಲ ಎಲ್ಲೋ ಹೋಗಿತ್ತು.... ಮೊದ ಮೊದಲು ದಟ್ಟ ಮರಗಳ ಒಳಗೇ ಇದ್ದ ಈ ಚಿತ್ರ ಪಕ್ಷಿಗಳ ಗುಂಪು ನಿಧಾನಕ್ಕೆ ಹೊರಗೆ ಬರಲು ಶುರು ಮಾಡಿತು.. ಒಂದೆರಡು ಪುಟ್ಟ ಹಕ್ಕಿಗಳು ಒಳ್ಳೆ ಯಾವುದೋ ಹಣ್ಣಿನ ತರಹ ಕೂತಿದ್ದ ಹಾಗೆ ಕಾಣುತ್ತ ಇತ್ತು...ಸ್ವಲ್ಪ ದೂರ ಇದ್ದರು ಅದರ ಅಂದ ಚೆಂದಕ್ಕೆ ಮನಸೋತು....ಕಣ್ಣಾರೆ ನೋಡಿ ಕ್ಯಾಮರಾ ನಲ್ಲಿ ಒಂದಷ್ಟು ಫೋಟೋ ತೆಗೆದುಕೊಂಡು ಅದರ ಚಲನ ವಲನ ರೆಕಾರ್ಡ್ ಮಾಡಿಕೊಳ್ಳುತ್ತಾ ಇದ್ದೆವು...


ಕೆಂಪು ಚಿತ್ತಾರದ ಚಿತ್ರ ಪಕ್ಷಿ -Scarlet Finch

ಒಂದು ನಾಲ್ಕು ಐದು ನಿಮಿಷ ಅಷ್ಟೇ ಇದ್ದದ್ದು.. ಆಮೇಲೆ ಅದರ ಆಹಾರ ಹುಡುಕಿಕೊಂಡು ಅಲ್ಲೇ ಕೆಳಗಿನ ಪೊದೆಗಳ ಒಳಗೆ ಮಾಯವಾಯಿತು....

ನಮ್ಮ ಗೈಡ್ ಗೆ ಅದರ ಬರುವಿಕೆ ಗೊತ್ತಿತ್ತು ಅಂಥ ಕಾಣುತ್ತೆ ಸರಿಯಾದ ಸಮಯಕ್ಕೆ ನಮ್ಮನ್ನು ಕರೆದು ಕೊಂಡು ಬಂದಿದ್ದ....wow ಎಂತಹ ಅದ್ಬುತ ಪುಟ್ಟ ಹಕ್ಕಿಗಳು....ಸ್ವಲ್ಪ ಹೊತ್ತಿನ ಬೇರೆ ಬೇರೆ ಪಕ್ಷಿ ಹುಡುಕಾಟದ ನಂತರ...ಕೆಳಗೆ ಇನ್ನಷ್ಟು ಸಮೀಪದಲ್ಲೇ ಇವು ಮತ್ತೆ ಸಿಕ್ಕಾಗ ಆದ ಆನಂದ ಅಷ್ಟಿಷ್ಟಲ್ಲ ... ತುಂಬಾ ನಾಚಿಕೆ ಸ್ವಭಾವದವೂ ಹತ್ತಿರದಲ್ಲಿ ಕಾಣಿಸುವುದು ಬಲು ಅಪರೂಪ.. ಒಂದಷ್ಟು ಒಳ್ಳೆಯ ಫೋಟೋಗಳನ್ನು ತೆಗೆದು ಚಿತ್ರಪಕ್ಷಿ scarlett finch ಗೆ ಟಾಟಾ ಮಾಡಿ ಮುಂದುವರಿದೆವು...

ಸ್ವಾಭಾವಿಕವಾಗಿ "ಸ್ಕಾರ್ಲೆಟ್ ಫಿಂಚ್" ಎಂದು ಕರೆಯಲ್ಪಡುವ ಈ ಪಕ್ಷಿಯು, ಫಿಂಚ್ ಕುಟುಂಬಕ್ಕೆ (Fringillidae) ಸೇರಿದ ಒಂದು ಸುಂದರವಾದ ಚಿಕ್ಕ ಹಕ್ಕಿಯಾಗಿದೆ.

ವೈಜ್ಞಾನಿಕ ಹೆಸರು (Scientific Name): Carpodacus sipahi

ರೂಪ ಮತ್ತು ವಿವರಣೆ (Appearance and Description):

ಗಂಡು ಹಕ್ಕಿ (Male): ಇದರ ಹೆಚ್ಚಿನ ತಲೆ, ಮೇಲ್ಭಾಗ ಮತ್ತು ಕೆಳಭಾಗವು  ಕಡು ಕೆಂಪು (ಸ್ಕಾರ್ಲೆಟ್) ಬಣ್ಣದಿಂದ ಕೂಡಿರುತ್ತದೆ. ಇದರ ಗಾಢ ಕಪ್ಪು ರೆಕ್ಕೆಗಳು ಮತ್ತು ಬಾಲವು ಇದಕ್ಕೆ ವ್ಯತಿರಿಕ್ತವಾಗಿ ಕಾಣುತ್ತದೆ ಮತ್ತು ಕೆಂಪು ಅಂಚುಗಳನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿ (Female): ಇದು ಗಂಡಿನಷ್ಟು ಆಕರ್ಷಕವಾಗಿರುವುದಿಲ್ಲ, ಹೆಚ್ಚಾಗಿ ಮಸುಕಾದ ಆಲಿವ್-ಹಳದಿ ಅಥವಾ ಆಲಿವ್-ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಹೊಳೆಯುವ ಹಳದಿ ಪೃಷ್ಠ (rump) ಇರುತ್ತದೆ.

ಗಾತ್ರ (Size): ಇದು ದಪ್ಪ ಮತ್ತು ಶಂಕುವಿನಾಕಾರದ ಕೊಕ್ಕನ್ನು ಹೊಂದಿರುವ ಮಧ್ಯಮ ಗಾತ್ರದ ಫಿಂಚ್ ಆಗಿದ್ದು, ಸುಮಾರು 17–19 ಸೆಂ.ಮೀ ಉದ್ದವಿರುತ್ತದೆ.

ವಾಸಸ್ಥಾನ ಮತ್ತು ವಿತರಣೆ (Habitat and Distribution):

ಇದು ಮುಖ್ಯವಾಗಿ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಭಾರತದ ಉತ್ತರಾಖಂಡ ರಾಜ್ಯದಿಂದ ಪೂರ್ವಕ್ಕೆ ನೇಪಾಳ, ಈಶಾನ್ಯ ಭಾರತದ ಬೆಟ್ಟಗಳು ಮತ್ತು ಆಗ್ನೇಯ ಏಷ್ಯಾದಲ್ಲಿ ಥೈಲ್ಯಾಂಡ್‌ನವರೆಗೂ ವ್ಯಾಪಿಸಿದೆ.

ಇದು ಸಮಶೀತೋಷ್ಣ ಕಾಡುಗಳಲ್ಲಿ ವಾಸಿಸುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ (ಸುಮಾರು 1400–3550 ಮೀ. ಎತ್ತರದಲ್ಲಿ) ತೆರೆದ ಪರ್ವತ ಪ್ರದೇಶದ  ಕಾಡುಗಳಲ್ಲಿ ಕಂಡುಬರುತ್ತದೆ.

ಚಳಿಗಾಲದಲ್ಲಿ, ಅನೇಕ ಪಕ್ಷಿಗಳು ದಕ್ಷಿಣಕ್ಕೆ ಮತ್ತು ಕೆಳಮಟ್ಟದ ಓಕ್ ಕಾಡುಗಳು ಅಥವಾ ತಪ್ಪಲು ಪ್ರದೇಶಗಳಿಗೆ ವಲಸೆ ಹೋಗುತ್ತವೆ.

ಆಹಾರ (Diet): ಇದು ಪ್ರಧಾನವಾಗಿ ಬೀಜಗಳು, ಮೊಗ್ಗುಗಳು, ಹಣ್ಣುಗಳು ಮತ್ತು ಸಣ್ಣ ಹಣ್ಣುಗಳನ್ನು ತಿನ್ನುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಪ್ರೋಟೀನ್‌ಗಾಗಿ ಸಾಂದರ್ಭಿಕವಾಗಿ ಸಣ್ಣ ಕೀಟಗಳನ್ನು ಸಹ ಸೇವಿಸುತ್ತದೆ.

ಸಂರಕ್ಷಣಾ ಸ್ಥಿತಿ (Conservation Status): IUCN ರೆಡ್ ಲಿಸ್ಟ್ ಪ್ರಕಾರ, ಇದನ್ನು ಕಡಿಮೆ ಕಾಳಜಿಯ ಪ್ರಭೇದ (Least Concern) ಎಂದು ವರ್ಗೀಕರಿಸಲಾಗಿದೆ.


#scarletfinch #birdslover #ಪಕ್ಷಿ #ಪಕ್ಷಿಪರಿಚಯ

Monday, March 21, 2022

ಶುಭಂ ಕರೋತಿ ಗುರುಕುಲ --ಗುರುಕುಲದ ಪ್ರತಿಧ್ವನಿಗಳು

 

ಶುಭಂ ಕರೋತಿ ಗುರುಕುಲ --ಗುರುಕುಲದ ಪ್ರತಿಧ್ವನಿಗಳು


ಜೀವನದಲ್ಲಿ ಶಿಕ್ಷಣ ಅತಿಮುಖ್ಯವಾದುದು. ನಮ್ಮ ಭಾರತೀಯ ಸಂಸ್ಕೃತಿಯ ಪುರಾತನ ಕಾಲದಿಂದಲೂ ಕೂಡ ವೇದ ಅಧ್ಯಯನ , ವೇದಾಭ್ಯಾಸ, ಶಿಕ್ಷಣ ಇವುಗಳಿಗೆ ಬಹಳ ಮಹತ್ವ ಕೊಡುತ್ತಿದ್ದರು. ಆಗಿನ ಕಾಲದಲ್ಲಿ ನಳಂದಾ ವಿಶ್ವವಿದ್ಯಾಲಯ ಅಂತಹ ಶಿಕ್ಷಣ ಸಂಸ್ಥೆಗಳು ಇದ್ದವೆಂದು ನಾವೆಲ್ಲ ಓದಿದ್ದೇವೆ.

ಇದಕ್ಕಿಂತಲೂ ಮುಖ್ಯವಾಗಿ ಗುರುಕುಲ ಪದ್ಧತಿ ಪ್ರಕಾರ ಶಿಕ್ಷಣ ನೀಡುವ ವ್ಯವಸ್ಥೆ ನಮ್ಮಲ್ಲಿ ಮೊದಲಿನಿಂದಲೂ ಇದೆ,

ಚಿಕ್ಕಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಶಿಕ್ಷಣ ಕೊಡಬೇಕು ಎಂದು ತುಂಬಾ ಹೋರಾಟಗಳು ಆಗಿವೆ.

ವಿಪರ್ಯಾಸ ಎಂದರೆ ಈಗಿನ ನಮ್ಮ ಶಿಕ್ಷಣ ಪದ್ಧತಿಯು ಒಳ್ಳೆಯ ಶಿಕ್ಷಣವನ್ನು ಕೊಟ್ಟು ಮಕ್ಕಳನ್ನು ರೂಪಿಸುವ ಬದಲಾಗಿ, ಒಂದು ವ್ಯವಹಾರಿಕ ದಂಧೆಯಾಗಿ ಮಾರ್ಪಟ್ಟಿದೆ.

ನೂರಾರು ಕಾರಣಗಳು.. ರಾಜಕೀಯ ಮೇಲಾಟ, ರಾಜಕಾರಣಿಗಳ ಹಸ್ತಕ್ಷೇಪ, ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತುಂಬಾ ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿಯ ಜನರ ಪ್ರಾಣವನ್ನು ಹಿಂಡುತ್ತಿದೆ.

ಕೆಲವೊಂದು ಕಡೆ ದುಡ್ಡು ಕೊಟ್ಟರು ಬೇಕಾಗಿರುವ ಶಿಕ್ಷಣ, ಸಂಸ್ಕೃತಿ, ವಿಧೇಯ, ಶ್ರದ್ಧೆ, ಇದು ಯಾವುದು ಸಿಗುತ್ತಿಲ್ಲ ಎಂಬುದು ನಮಗೆ ನಿಮಗೆ ತಿಳಿದಿರುವ ವಿಷಯವೇ. ಆದರೂ ಕೆಲವೊಂದು ವಿದ್ಯಾಸಂಸ್ಥೆಗಳು ಡೊನೇಶನ್ ದುಡ್ಡು ತೆಗೆದುಕೊಂಡರು ಅವರ ಆತ್ಮಸಾಕ್ಷಿಯಿಂದ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಶಿಕ್ಷಣ ನೀಡುವ ವ್ಯವಸ್ಥೆಯಾಗಿದೆ.

ಇಂಥ ಸಮಾಜದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ಎಲೆಮರೆಯ ಕಾಯಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.

ನನ್ನ ಅದೃಷ್ಟವು ಏನೋ ಇಂತಹ ಒಂದು ಸಂಸ್ಥೆಯಲ್ಲಿ ನನ್ನ ಒಡನಾಟ ಉಂಟಾಗಿದ್ದು ತುಂಬಾ ಖುಷಿ ಮತ್ತು ಆನಂದವನ್ನು ಕೊಟ್ಟಿತು.

ಹೌದು ನಾನು ಹೇಳಲು ಹೊರಟಿರುವುದು ಬೆಂಗಳೂರು ಸಮೀಪ ದೊಡ್ಡ ಆಲದ ಮರದ ರಸ್ತೆ ರಾಮೋಹಳ್ಳಿ ಹತ್ತಿರ ಇರುವ, ಬರೀ ಹೆಣ್ಣುಮಕ್ಕಳಿಗಾಗಿಯೇ ಸ್ಥಾಪಿಸಿರುವ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಭಾಗವನ್ನು, ಗುರುಕುಲ ಶಿಕ್ಷಣ ಮಾದರಿಯಲ್ಲಿ ಹೇಳಿಕೊಳ್ಳುತ್ತಿರುವ, ಅದರಲ್ಲೂ ಉಚಿತವಾಗಿ ಊಟ ವಸತಿಗಳನ್ನು ಕೊಟ್ಟು ಸದೃಢ, ಸುಸಂಸ್ಕೃತ ಹಾಗೂ ಭವಿಷ್ಯದ ಭಾರತೀಯ ಹೆಣ್ಣುಮಕ್ಕಳನ್ನು ಬೆಳೆಸುತ್ತಾ ಬೆಳೆದು ಬಂದಿರುವ "ಶುಭಂ ಕರೋತಿ ಗುರುಕುಲ" ಇದರ ಬಗ್ಗೆ.

ಶ್ರೀಯುತ ಪ್ರಮೋದ್ ಕಾಮತ್ ಅವರು ಇಪ್ಪತ್ತೈದು ವರ್ಷಗಳ ಕೆಳಗೆ ಬೀಜವನ್ನು ಹಾಕಿ, ಸಸಿಯನ್ನು ಬೆಳೆಸಿ ಇಂದು ಹೆಮ್ಮರವಾಗುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ನೂರಾರು ಬಡ ಹೆಣ್ಣುಮಕ್ಕಳು ಈ ಗುರುಕುಲದ ಸದುಪಯೋಗವನ್ನು ಪಡೆದು ಇಂದು ಅತ್ಯುನ್ನುತ ಹುದ್ದೆಗಳಲ್ಲಿ ಇದ್ದಾರೆ.

ಅಚಾನಕ್ಕಾಗಿ ಪರಿಚಯವಾದ ನಮ್ಮ ದುರ್ಗಾ ಪರಮೇಶ್ವರ್ ಭಟ್, ಶುಭಂ ಕರೋತಿ ಗುರುಕುಲದ ಮೇಲ್ವಿಚಾರಕರು, ನನ್ನ ಬಳಿ ಬಂದು ನಮ್ಮ ಗುರುಕುಲ ಕ್ಕಾಗಿ ಡಾಕ್ಯುಮೆಂಟರಿ ವಿಡಿಯೋ ಅಗತ್ಯವಿರುವ ಬಗ್ಗೆ ಪ್ರಸ್ತಾಪಿಸಿದರು. ನಾನು ಸರಿ ಎಂದು ಗುರುಕುಲಕ್ಕೆ ಬೇಟಿ ಕೊಟ್ಟೆ.

ಮೊದಲನೇ ಭೇಟಿ ಯಿಂದಲೇ ಗುರುಕುಲದ ಮಹತ್ವವು ಅರಿವಾಗತೊಡಗಿತು. ಸಂಪೂರ್ಣ ಸಂಸ್ಕೃತಮಯ ವಾತಾವರಣದಲ್ಲೇ ಬೆಳೆಯುತ್ತಿರುವ ಕರ್ನಾಟಕದ ಬೇರೆ ಮೂಲೆಮೂಲೆಗಳಿಂದ ಬಂದ ಹೆಣ್ಣು ಮಕ್ಕಳು 5ನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿದ್ದ ರೀತಿ, ಇದರ ಜೊತೆ ಜೊತೆಯಲ್ಲಿಯೇ ವೇದ ಅಧ್ಯಯನ, ಉಪನಿಷತ್, ಮಂಕುತಿಮ್ಮನ ಕಗ್ಗ, ವಚನಗಳು, ಸಂಗೀತ, ಕಲೆ, ಭರತನಾಟ್ಯ, ತಬಲ, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್, ಕೊಳಲು, ಕರಾಟೆ.... ಅಬ್ಬಾ ತಮಗೆ ಸಿಕ್ಕಿರುವ ಅಲ್ಪ ಸಮಯದಲ್ಲಿ ಇವೆಲ್ಲವನ್ನೂ ಕಲಿಯುತ್ತಾ ಲವಲವಿಕೆಯಿಂದ ಈ ಪರಿಸರದಲ್ಲಿ ಓಡಾಡುತ್ತಾ ಇದ್ದಾಗ , ನನಗೆ ನಿಜವಾಗಲೂ ಅನಿಸಿದ್ದು ಇಂತಹ ನೂರಾರು ಗುರುಕುಲಗಳ ಅವಶ್ಯಕತೆ ನಮ್ಮ ಈಗಿನ ಪೀಳಿಗೆಯ ಮಕ್ಕಳಿಗೆ ಇದೆಯೆಂದು.

ಇಲ್ಲಿನ ಒಂದು ದಿನದ ಪೂರ್ಣ ದಿನಚರಿಯ ಸಂಕ್ಷಿಪ್ತ ವರದಿಯನ್ನು ವಿಡಿಯೋ ಮೂಲಕ ಒಂದು ಡಾಕ್ಯುಮೆಂಟರಿ ತರ ಮಾಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿದ್ದು ನನ್ನ ಅದೃಷ್ಟವೇ ಸರಿ.

ಮೊದಲಿಗೆ ಚಿಕ್ಕದಾಗಿ ವಿಡಿಯೋ ಮಾಡೋಣ ಎಂದುಕೊಂಡಿದ್ದೆ. ಆದರೆ ಇಲ್ಲಿನ ಪರಿಸರ, ಇಲ್ಲಿರುವ ಮಕ್ಕಳ ಶ್ರದ್ಧೆ, ಭಕ್ತಿ, ಪ್ರತಿಯೊಂದು ಆಕ್ಟಿವಿಟಿ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ರೀತಿ, ನನ್ನನ್ನು ಮಂತ್ರಮುಗ್ಧನಾಗಿ ಮಾಡಿಸಿತು.

ಇದೇ ಕಾರಣಕ್ಕಾಗಿ ಹೆಚ್ಚು ಸಮಯವನ್ನು ಕೊಟ್ಟು ಗುರುಕುಲದ ಪ್ರತಿಯೊಂದು ವಿಷಯಗಳನ್ನು ಕುಲಂಕುಶವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಒಂದು ಡಾಕ್ಯುಮೆಂಟರಿಯನ್ನು ನಿರ್ಮಿಸಿ ಕೊಟ್ಟಿದ್ದೇನೆ.

ಸುಮಾರು 10 ಎಕರೆ ಜಾಗದಲ್ಲಿ, ಸುಂದರ ಬೃಹದಾಕಾರವಾಗಿ ಬೆಳೆದು ನಿಂತ ಅರಳಿಮರ ,ಅಶ್ವತ್ಥಮರ, ನೇರಳೆ ಮರ. ಇವುಗಳ ಕೆಳಗೆ ಪಾಠ ಮಾಡುವ ರೀತಿ.. ಪಕ್ಷಿಗಳು, ಚಿಟ್ಟೆಗಳು, ಅಳಿಲು, ಮುಂಗುಸಿ, ಇವುಗಳ ಜೊತೆ ಜೊತೆಯಲ್ಲಿಯೇ ಪಾಠಗಳನ್ನು ಕಲಿಯಲು ಇರುವ ಸಣ್ಣ ಕೊಠಡಿಗಳು. ಇಲ್ಲಿನ ಮಕ್ಕಳೇ ಮುತುವರ್ಜಿವಹಿಸಿ ಬೆಳೆಸುವ ತರಕಾರಿಗಳು, ಹೂಗಳು, ಇಲ್ಲಿ ಇರುವ ಗೋಶಾಲೆ, ಹಸುಗಳ ಜೊತೆಗಿನ ಒಡನಾಟ!!! ಅಬ್ಬಾ ಇವುಗಳನ್ನು ನೋಡುತ್ತಿದ್ದರೆ ಇಲ್ಲಿನ ಮಕ್ಕಳು ಎಷ್ಟು ಅದೃಷ್ಟವಂತರು ಎಂದು ಅನ್ನಿಸದೇ ಇರಲಾರದು.

ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭವಾಗುವ ದಿನಚರಿ ಪ್ರತಿದಿನ ಪೂಜಾ ವಿಧಾನ, ವೇದಾಧ್ಯಯನ, ಪಾಠ ಆಟ .. ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಒಳಗೊಂಡಿರುತ್ತದೆ.

ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆ ಪದ್ಧತಿ ಆಚಾರ ವಿಚಾರಗಳು ಅನಾವರಣಗೊಳ್ಳುತ್ತದೆ. ಇದಿಷ್ಟು ಮಾತ್ರವಲ್ಲದೆ ಇಲ್ಲಿನ ಮಕ್ಕಳು ಬೇರೆ ಬೇರೆ ಕಡೆ ಹೋಗಿ ತಮ್ಮ ಕಲಿಕಾ ಶಕ್ತಿಯನ್ನು ಪ್ರದರ್ಶಿಸಿ ಪ್ರಶಸ್ತಿಗಳನ್ನು ತೆಗೆದುಕೊಂಡು ಬಂದಿರುತ್ತಾರೆ.

ಎಲ್ಲಾ ಮಕ್ಕಳ ಬಾಯಲ್ಲಿ ಸುಮಾರು ಸಾವಿರ ಶ್ಲೋಕಗಳು, ವಚನಗಳು, ಮಂಕುತಿಮ್ಮನ ಕಗ್ಗ, ವೇದ. ಭಗವದ್ಗೀತೆ ಉಪನಿಷತ್, ಎಷ್ಟು ಚೆನ್ನಾಗಿ ಬೆರೆತಿವೆ ಎಂದರೆ.ಇಷ್ಟು ಶ್ಲೋಕಗಳಲ್ಲಿ ಇವರು ಅಂತ್ಯಾಕ್ಷರಿ ಹಾಡುತ್ತಿರುತ್ತಾರೆ.

ಇದರ ಬಗ್ಗೆ ಸಂಕ್ಷಿಪ್ತವಾದ ಒಂದು ಇಪ್ಪತ್ತು ನಿಮಿಷದ ವಿಡಿಯೋವನ್ನು ಮಾಡಿದ್ದೇನೆ. ಈ ವಿಡಿಯೋ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಇದೆ. ಈ ವಿಡಿಯೋ ಇಷ್ಟು ಚೆನ್ನಾಗಿ ಮೂಡಿಬರಲು ಸಹಕರಿಸಿದ "ಶುಭಂ ಕರೋತಿ ಗುರುಕುಲದ " ಸಂಸ್ಥಾಪಕರಾದ ಶ್ರೀಯುತ ಪ್ರಮೋದ್ ಕಾಮತ್ ಅವರು, ದುರ್ಗಾ ಪರಮೇಶ್ವರ್ ಬಟ್ ಅವರು. ಮೃತ್ಯುಂಜಯ ಶಾಸ್ತ್ರಿ , ಹಾಗೂ ಗುರುಕುಲದ ಮಕ್ಕಳು ಇವರೆಲ್ಲರಿಗೂ ನನ್ನ ಅನಂತ ವಂದನೆಗಳು

ಹಾಗೂ ವಿಡಿಯೋ ಎಡಿಟಿಂಗ್ ನಲ್ಲಿ ಸಹಕರಿಸಿದ ಶ್ರೀಯುತ ಹನುಮಂತ ರಾಜು ಅವರಿಗೂ ನನ್ನ ಅನಂತ ವಂದನೆಗಳು

ನಿಮಗಾಗಿ ಗುರುಕುಲದ ಬಗ್ಗೆ ಮಾಡಿರುವ ವಿಡಿಯೋ ಲಿಂಕ್ ಈ ಕೆಳಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

ಕನ್ನಡ ವರ್ಷನ್ :- https://youtu.be/pPjkQr_fCyE

English version - https://youtu.be/uW_x379_C_4


ಶುಭಂ ಕರೋತಿ ಗುರುಕುಲ ಕ್ಕೆ ಯಾವುದೇ ರೀತಿಯ ಸಹಾಯಕ್ಕೆ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಬಹುದು

Shubham Karoti (Maitreyee Gurukula),

No 52 / 1 , Big Banian Tree Road, Ramohalli, Kengeri Hobli , Bengaluru 560 074, Karnataka, India

Email : info@shubhamkarotigurukula.com

Tel: +91 (80) 28437423, +91 (80) 28437424

Phone: +91 99000 51846

Friday, May 3, 2019

ಗೊರವಂಕ - ಮೈನ - common myna

ಗೊರವಂಕ 

ಕಪ್ಪು ಮಿಶ್ರಿತ ಕಂದು ಮೈಬಣ್ಣ, ರೆಕ್ಕೆಯಲ್ಲಿ ಬಿಳಿ ಬಣ್ಣದ ರೇಖೆ, ಕಪ್ಪು ತಲೆ, ಕಣ್ಣಿನ ಸುತ್ತ ಹಳದಿ ಬಣ್ಣದ ,  ಕಾಲು ಹಾಗು ಕೊಕ್ಕು ಹಳದಿ ಬಣ್ಣ,   ಸಾಮಾನ್ಯವಾಗಿ ಇದು ಗುಂಪಾಗಿ ಅಥವಾ ಜೋಡಿ ಯಾಗಿ ಇರುತ್ತವೆ...  ಈ ಹಕ್ಕಿಯು ಆಕ್ರಮಣಶೀಲ ಕ್ಕೆ ಹೆಸರು ವಾಸಿಯಾಗಿದ್ದು... ತನ್ನ ಗೂಡುಗಳ ಹತ್ತಿರ ಬರುವ ಬೇರೆ ಪಕ್ಷಿಗಳನ್ನು ಓಡಿಸುತ್ತಾ .. ಇರುತ್ತವೆ... ಏಷ್ಯಾ ದಲ್ಲಿ ಎಲ್ಲಕಡೆ ಸಾಮಾನ್ಯವಾಗಿ ಕಾಣಸಿಗುವ ಇವು ಪ್ರಪಂಚದ ಬೇರೆ ಭಾಗ ಗಳ್ಳಿ  ಕಾಣಸಿಗುತ್ತವೆ ...

ನಮ್ಮ ಮನೆಯ ಹತ್ತಿರದ ಆಲದ ಮರದ ಸಮೀಪ ಹಾಗೆ ಕುಳಿತು ಇದರ ಹಾಗು ಗಿಳಿ ಗಳ  ಚಲನ ವಲನ ವನ್ನು ಅಭ್ಯಸಿಸುತ್ತಾ ಇದ್ದೆ...  ಗುಂಪಾಗಿ ಇದ್ದ ಈ ಗೊರವಂಕ ಅಥವಾ ಮೈನ ... ಮರದ ಹಣ್ಣುಗಳನ್ನೂ, ಹಾಗು ಕೀಟಗಳನ್ನು ಬಹಳ ಶಬ್ದ ಮಾಡಿಕೊಂಡು ತಿನ್ನುತ್ತಾ ಇತ್ತು...  ಇದ್ದಕ್ಕೆ ಇದ್ದ ಹಾಗೆ ಎಲ್ಲ ಮೈನ ಗಳು  ಸುಮಾರು ಒಂದು ೨೦ ರಿಂದ ೨೫ ಇರಬಹುದು,  ಒಂದು ಚಿಕ್ಕ ಮರದ ಹತ್ತಿರ ಒಟ್ಟಿಗೆ ಸೇರಿಕೊಂಡು ಜೋರಾಗಿ ಚೀರಾಡಲು ಶುರು ಮಾಡಿತು....  ನಾನು ಕುತೂಹಲ ದಿಂದ ಏನಿರಬಹುದು ಅಂತ ನೋಡುತ್ತಾ ಇದ್ದೆ.  ಒಂದೆರಡು ನಿಮಿಷ ಜೋರಾಗಿ ಗಲಾಟೆ ಮಾಡಿ... ಒಂದ್ದು ದೊಡ್ಡ ರಾಪ್ಟರ್ ಹಕ್ಕಿ ಶಿಕ್ರಾ ಅನ್ನು ಓಡಿಸಿಕೊಂಡು  ಹೋದವು...  ಶಿಕ್ರಾ ಇದು hawk  ಅಥವಾ ಗಿಡುಗ ಜಾತಿಗೆ ಸೇರಿದ ಹಕ್ಕಿ, ಸಣ್ಣ ಪುಟ್ಟ ಹಕ್ಕಿಗಳನ್ನು ಹಾರಾಡುತ್ತಲೇ ತಿನ್ನುತ್ತವೆ.....  ಇದು ಬಂದಿರುವುದನ್ನು ಗಮನಿಸಿದ ಮೈನ .. ಎಲ್ಲ ಒಟ್ಟುಗೂಡಿ ... ಇದನ್ನು ಓಡಿಸಿದವು ...ಹಾಗೆ ಕಾಗೆಗಳು ಜೊತೆಗೆ ಸೇರಿಕೊಂಡವು....
ಇದರ ಆಕ್ರಮಣ ಶೀಲತೆ ಹಾಗು ಗುಂಪಿನ ಒಗ್ಗಟ್ಟು ನೋಡಿ ಬೆರಗಾದೆ....