Sunday, August 20, 2023

ಚಿಕ್ಕ ಮಕ್ಕಳ ಪಕ್ಷಿ ವೀಕ್ಷಣೆ ಉಳ್ಳಾಲ ಕೆರೆ

 ಸುಂದರ ಶ್ರಾವಣ ಭಾನುವಾರ. 20-Aug-2023


ಮೋಡ ಮುಸುಕಿದ ವಾತಾವರಣದಲ್ಲಿ, ಆಗೊಮ್ಮೆ ಈಗೊಮ್ಮೆ ನಿಧಾನಕ್ಕೆ ಮೋಡದ ಮರೆಯಿಂದ ಈಚೆ ಬರುತ್ತಿದ್ದ ಸೂರ್ಯ. ಇದರ ಜೊತೆಯಲ್ಲಿ ನಮ್ಮ ಪುಟ್ಟ ಮಕ್ಕಳ ಸೈನ್ಯ ಪಕ್ಷಿ ವೀಕ್ಷಣೆಗೆ ಎಂದು ಬೆಂಗಳೂರಿನ ಉಳ್ಳಾಲ ಕೆರೆ ಹತ್ತಿರ ಬೆಳಿಗ್ಗೆ 7:00 ಗಂಟೆಗೆ ಬಂದು ಸೇರಿತ್ತು.

ಎಲ್ಲ ಮಕ್ಕಳು ಮೊದಲೇ ಹೇಳಿದ ಹಾಗೆ ಬೈನಾಕುಲಾರ್ಸ್, ಪುಸ್ತಕ ಪೆನ್ನು ಹಾಗೆ ಪಕ್ಷಿಗಳ ಬಗ್ಗೆ ಮಾಹಿತಿ ಇರುವ ಒಂದು ಸಣ್ಣ ಕೈಪಿಡಿಯನ್ನು ತಂದಿದ್ದರು. 

ಅವರ ತಂದೆ ತಾಯಿಯ ಜೊತೆಗೂಡಿ ಬೆಳಗ್ಗೆ ಅತಿ ಉತ್ಸಾಹದಿಂದ ಎಲ್ಲರೂ ಹೊಸ ಹೊಸ ಪಕ್ಷಿಗಳನ್ನು ನೋಡಲು ಹಾಗೂ ತಿಳಿದುಕೊಳ್ಳಲು ಬಂದಿದ್ದರು.

ನೀರು ಕಮ್ಮಿ ಇರುವ ಕಾರಣ ಕೆರೆ ಅಂಗಳದಲ್ಲಿ ನೂರಾರು ಬಗೆಯ ನೀರಿನ ಹಕ್ಕಿಗಳು (water birds)ಜಾಸ್ತಿ ಇದ್ದವು.

ನೀರು ಕಾಗೆ, ಬಾತು ಕೋಳಿಗಳು, ಬ್ಲಾಕ್ಹೆಡ್ಐಬಿಸ್, ಮಿಂಚುಳ್ಳಿ ಎಗ್ ರೇಟ್, ಹದ್ದು ಮತ್ತು ಗರುಡ ಪಕ್ಷಿಗಳು ಅತಿ ಸುಲಭವಾಗಿ ಸಿಕ್ಕುವ ಮೀನನ್ನು ಹಿಡಿದುಕೊಳ್ಳಲು ಬೆಳಗ್ಗೆ ಬೆಳಗ್ಗೆನೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದವು.

ಒಂದು ಚಿಕ್ಕ ವಿಚಾರ ವಿನಿಮಯದ ನಂತರ ನಮ್ಮ ಬರ್ಡ್ ವಾಕಿಂಗ್ ಶುರುವಾಯಿತು. 

ಚಿಕ್ಕ ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳು, ಹಕ್ಕಿಗಳು ಮೀನನ್ನು ತಿನ್ನುತ್ತಿರುವ ದೃಶ್ಯ, ಪ್ರೋಬಿಂಗ್ ಮಾಡುತ್ತಿರುವ ರೀತಿ, ಅಹಾರ ಹುಡುಕುವ ಹಾರಾಡುವ ಪರಿ.  ಇದೆಲ್ಲವನ್ನು ಹತ್ತಿರದಿಂದ ನೋಡುತ್ತಾ ಖುಷಿ ಪಡುತ್ತಾ ಪಕ್ಷಿ ವೀಕ್ಷಣೆಯನ್ನು ಮಾಡುತ್ತಿದ್ದರು.

ಇದರ ಜೊತೆಗೆ ಹಕ್ಕಿಗಳ ಪುಕ್ಕ, ಅವುಗಳ ಚಲನ ವಲನಗಳು, ಹಕ್ಕಿಗಳ ಗೂಡು ಇವುಗಳನ್ನು ಕುತೂಹಲದಿಂದ ವೀಕ್ಷಿಸುತ್ತಾ ಇದರ ಬಗ್ಗೆ ನೂರಾರು ಪುಟ್ಟ ಪುಟ್ಟ ಪ್ರಶ್ನೆಗಳನ್ನು ಕೇಳುತ್ತಾ.  ತಮ್ಮ ಜೊತೆಯ ಮಕ್ಕಳ ಸಂಗಡ ಆಟ ಆಡುತ್ತಾ. ಖುಷಿಯಿಂದ ಪರಿಸರದ ಬಗ್ಗೆ ನೇಚರ್ ಬಗ್ಗೆ ಚಿಟ್ಟೆಗಳ ಬಗ್ಗೆ ಹಾಗೆ ಕೆಲವೊಂದು ಬಗೆಯ ಜೇಡಗಳನ್ನು ನೋಡಿ ಸಂತಸ ಪಡುತ್ತಿದ್ದರು.

ಕೆರೆಯ ಸುತ್ತ ಒಂದು ಎರಡು ಕಿಲೋ ಮೀಟರ್ ಗಳಷ್ಟು ದೂರ ಸುತ್ತಾಡಿ, ತಾವು ತಂದಿದ್ದ ಪುಟ್ಟ ಪುಸ್ತಕದಲ್ಲಿ ಹಕ್ಕಿಗಳ ಚಲನವಲನಗಳನ್ನು ಅವುಗಳ ಚಿತ್ರಗಳನ್ನು ಬಿಡಿಸಿ ಮಾಹಿತಿಯನ್ನು ದಾಖಲಿಸಿಕೊಂಡರು.

ಬೆಳಿಗ್ಗೆ 7:00 ಯಿಂದ 9:30ವರೆಗೆ ಟೈಮ್ ಹೇಗೆ ಹೋಯಿತು ಅನ್ನುವುದೇ ಗೊತ್ತಾಗಲಿಲ್ಲ.  ಇಂದಿನ ಮಕ್ಕಳು ಮೊಬೈಲ್ ಕಂಪ್ಯೂಟರ್ ಇದರಲ್ಲೇ ಮುಳುಗಿ ಹೋಗಿರುತ್ತಾರೆ, ಇಂತಹ ನೇಚರ್ ವಾಕ್ , ಬರ್ಡ್ ವಾಕ್, ಬರ್ಡ್ ವಾಚಿಂಗ್...... ಮಕ್ಕಳಿಗೆ ಅತಿ ಅವಶ್ಯಕವಾಗಿದೆ ಪ್ರತ್ಯಕ್ಷವಾಗಿ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹಾಗೂ ಇವುಗಳನ್ನು  ಸಂರಕ್ಷಿಸುವ ಬಗ್ಗೆ ತಿಳಿಸಿ ಹೇಳಿ ಕೊಡಬೇಕಾಗಿದೆ


ಗೀಜನಗ ಗೂಡಿನ ಜೊತೆ ಕುತೂಹಲದಿಂದ ನೋಡುತ್ತಿರುವ ಮಕ್ಕಳು.


ಪುಟ್ಟ ಪುಸ್ತಕ ದಲ್ಲಿ ತಾವು ನೋಡಿರುವ ಹಕ್ಕಿ ಗಳ ವಿವರ ದಾಖಲಿಸಿ ಕೊಂಡಿರುವ ಮಕ್ಕಳು


Ibis ಹಕ್ಕಿಗಳ ಚಟುವಟಿಕೆ ನೋಡುತ್ತಾ ಇರುವುದು.
ಒಂದು ಹಕ್ಕಿ ಮೀನನ್ನು ಅರ್ದ ತಿಂದು ಎಸೆದಿದೆ.. ಅದನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಾ ಇರುವ ಮಕ್ಕಳು

ಹಕ್ಕಿಗಳ ಪುಕ್ಕ

ಪಕ್ಷಿಗಳ ಬಗೆಗಿನ ಮಾಹಿತಿಯನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಿರುವ ಮಕ್ಕಳು












ಬಿಲ್ವಪತ್ರೆ ..  ಬಿಲ್ವ ಮರದ ಹಣ್ಣು... 

Monday, August 7, 2023

ಜಿಮ್ ಕಾರ್ಬೆಟ್ --- ಕಾಡಿನ ನಿಜವಾದ ಅನುಭವ.. ಭಾಗ ೨

 ಜೂನ್ ೨೧ ೨೦೨೩ ಬುಧವಾರ ಬೆಳಿಗ್ಗೆ...

(ಮೊದಲ ಭಾಗ ಓದಲು - https://guruprsad.blogspot.com/2023/07/1.html)      

ರಾತ್ರಿ ಲೇಟ್ ಆಗಿ ಮಲಗಿದ್ದರು  ಸಹ ... ಸಮಯಕ್ಕೆ ಮುಂಚೆನೇ ಎಚ್ಚರ ಆಗಿತ್ತು ... ಅದಕ್ಕೆ ಕಾರಣ ಹೊಸ ಹೊಸ ಪಕ್ಷಿಗಳನ್ನು  ನೋಡ ಸಿಗುವ ಆನಂದ...  ಕೆಲವೊಂದು ಪಕ್ಷಿ ಪ್ರಭೇದ ಹಿಮಾಲಯದ ತಪ್ಪಲಿಗೆ ಮಾತ್ರ ಸೀಮಿತ.. ಇವುಗಳನ್ನು ಬೇರೆ ಕಡೆ ನೋಡುವ ಸೌಭಾಗ್ಯ ಸಿಗುವುದು ಕಮ್ಮಿಯೇ...  ಅದಕ್ಕೆ ನಮ್ಮ ಕುತೂಹಲ ಹೆಚ್ಚಾಗಿತ್ತು...

ಬೆಳಿಗ್ಗೆ ೫.೩೦ ಬೇಗ ಬೆಳಕು ಹರಿದಿತ್ತು... ಬೆಳಿಗ್ಗೆ ಎದ್ದ ಕೂಡಲೇ ಹೊರಗಡೆ ಬಂದು ನೋಡಿದೆ.... ಸುತ್ತಲು ಬೆಟ್ಟ ಗುಡ್ಡಗಳಿಂದ ಆವರಿಸಿದ ಕಾಡು..  ನಮ್ಮ ಫಾರೆಸ್ಟ್ ಗೆಸ್ಟ್ ಹೌಸ್ ಮುಂದೆ ವಿಶಾಲ ಜಾಗ... ಬಾನೆತ್ತರ ಬೆಳೆದು ನಿಂತ ಮರಗಳು. ಆಗಲೇ ಹಕ್ಕಿಗಳ ಚಿಲಿ ಪಿಲಿ  ನಿನಾದ ಜೋರಾಗಿ ಕೇಳುತ್ತ ಇತ್ತು..

ಬೇಗ ಬೇಗ ರೆಡಿ ಆಗಿ ಕ್ಯಾಮೆರಾ ಸಮೇತ ಹೊರಗಡೆ ಬಂದೆ.  ಅಷ್ಟರಲ್ಲಿ ಆಗಲೇ ನಮ್ಮ ಅಮರ್ ಚಂದ್ ಚಪಾತಿ ಹಾಗು ಪಲ್ಯ ರೆಡಿ ಮಾಡ್ತೇನೆ ತಿನ್ಕೊಂಡು ಹೊರಡೋಣ ಅಥವಾ ಕಟ್ಟಿಕೊಂಡು ಹೊರಡೋಣ ಅಂತ ಹೇಳಿ ರೆಡಿ ಮಾಡಲಿಕ್ಕೆ ಹೋದರು.  ಅಮರ್ ಚಂದ್ ಅಪ್ಪಟ ಉತ್ತರಾಖಂಡ್ ರಾಜ್ಯದ ದೇಸಿ ಹುಡುಗ. ಒಳ್ಳೆಯ ಕುಕ್  ನಾವು ಇದ್ದಷ್ಟು ದಿನ ನಮಗೆ ಬೇಕಾದ ಹಾಗೆ ರುಚಿ ರುಚಿ ಅಡುಗೆ ಮಾಡಿ ಕೊಡುತ್ತ ಇದ್ದರು. ಹಾಗೆ ಇವರ ಪಕ್ಷಿ ಬಗ್ಗೆ ಇರುವ ಜ್ಞಾನ ಕೂಡ ಅಪಾರ ..ಇದು ನಮಗೆ ಪಕ್ಷಿ ವೀಕ್ಷಣೆ ಹಾಗು ಸರ್ವೇ ಸಮಯದಲ್ಲಿ ನೆರವಾಯಿತು.

ಒಂದು ಕೈ ನಲ್ಲಿ ಟೀ ಹಿಡ್ಕೊಂಡು ಬೈನಾಕ್ಯುಲರ್ ಹೆಗಲಿಗೆ ಹಾಕಿಕೊಂಡು ಬೆಳಿಗ್ಗೆ ಬೆಳಿಗ್ಗೆನೇ ನಮ್ಮ ಗೆಸ್ಟ್ ಹೌಸ್ ಆವರಣದಲ್ಲಿ ಇದ್ದ ಪಕ್ಷಿಗಳ ಚಲನ ವಲನ ಗಮನಿಸಿ ರೆಕಾರ್ಡ್ ಮಾಡುವುದಕ್ಕೆ ಶುರು ಮಾಡಿದೆವು...

ಡಾಲರ್ ಬರ್ಡ್, ಕಲೀಜ್ ಫೆಸೆಂಟ್ , Grey-headed Woodpecker, red jungle Blue Whistling-Thrush, Greater Hornbill , paradise fly-catcher .. ಹೀಗೆ ಅನೇಕ ಹೊಸ ಹೊಸ ಮತ್ತು ನೋಡಿರುವ ಪಕ್ಷಿ ಹತ್ತಿರದಲ್ಲೇ ಹರಡುತ್ತಾ ತನ್ನ ಬೆಳಗಿನ ದಿನಚರಿ ಪ್ರಾಂಭಿಸಿತ್ತು..


Blue Whistling-Thrush

Rosy Starlings

Grey-headed Woodpecker
White-crested Laughingthrush
Red junglefowl







ಬರೀ ಸೌತ್ ಇಂಡಿಯಾ ಕಡೆ ಬರ್ಡಿಂಗ್ ಮಾಡಿದ್ದ ನನಗೆ .. ಇಲ್ಲಿನ ಪರಿಸರದ ಅಂದರೆ ಹಿಮಾಲಯ ಬೆಲ್ಟ್ ನಲ್ಲಿ ಮಾತ್ರ ಕಾಣಸಿಗುವ ಒಂದೊಂದು ಪಕ್ಷಿಗಳು ನಮಗೆ  ಹೊಸ ಹೊಸ ಪಕ್ಷಿ,  ಮೊದಲ ಸರಿ ನೋಡುವ ಅನುಭವ ... ಅಬ್ಬಾ ಕುತೂಹಲ. ಸಂತೋಷ, ಒಟ್ಟಿಗೆ  ಆಗ್ತಾ ಇತ್ತು.. ನಾನು ಮತ್ತು ನಮ್ಮ ಸಹಪಾಠಿ ಮುನೀಶ್ ಒಂದೊಂದು ಹಕ್ಕಿ ನೋಡಿ ಅದನ್ನು ರೆಕಾರ್ಡ್ ಮಾಡುತ್ತ ಖುಷಿ ಪಡ್ತಾ ಇದ್ವಿ.  

ಇನ್ನು ನಾವು ಬರ್ಡಿಂಗ್ ಟ್ರೇಲ್ ಅಂತ ಕಾಡಿಗೆ ಹೋಗಿಲ್ಲ ಇಲ್ಲೇ ಇಷ್ಟು ಬರ್ಡ್ಸ್ ನೋಡಲಿಕ್ಕೆ ಸಿಗುತ್ತಾ ಇದೆ ಇನ್ನು ಕಾಡಿನ ಒಳಗಡೆ?...  ಇನ್ನು ಏನೇನು ಸಿಗಬಹುದು ಎಂದು ಖುಷಿ ಇಂದ ಇದ್ವಿ.

ಅಷ್ಟರಲ್ಲಿ  ನಮ್ಮ ಅಮರ್ ಕೂಗಿ ಕರೆದ ಪರೋಟ , ಚಪಾತಿ ರೆಡಿ ಇದೆ ಅಂತ.  ಬೆಳಿಗ್ಗೆ ಇನ್ನು ೬-೩೦ ಇಷ್ಟು ಬೇಗ ತಿನ್ನೋದ ಅಥವಾ ಪ್ಯಾಕ್ ಮಾಡಿಕೊಂಡು ಹೋಗೋದ ಅಂತ ಯೋಚಿಸ್ತಾ ಇದ್ವಿ.. ಪ್ಯಾಕ್ ಆಗೋಲ್ಲ ಯಾಕೆ ಅಂದ್ರೆ ನಮ್ಮ bagpack ಜಾಸ್ತಿ ನೇ ಇದೆ , ಕ್ಯಾಮೆರಾ, ಬೈನಾಕ್ಯುಲರ್, water bottle, ಫೀಲ್ಡ್ ಗೈಡ್ .. ಇದರ ಜೊತೆ ತಿಂಡಿ ಕೂಡ ಅಂದರೆ ನೆಡೆಯಲು ತೊಂದರೆ ಆಗುತ್ತೆ ಅಂತ . ಒಂದೆರಡು ಚಪಾತಿ /ಪರೋಟ ಅಲ್ಲೇ ತಿಂದು ಹೊರಟೆವು .

ಬೆಳಗಿನ ಎಳೆ ಬಿಸಿಲು , ಮುಂಜಾನೆಯ ದಟ್ಟ ಮಂಜನ್ನು ಸೀಳಿ ನಿದಾನಕ್ಕೆ ಹೊರಚಾಚುತ್ತ ಇದ್ದ ರೀತಿ ಕಣ್ಣಿಗೆ ಮುದವನ್ನು ನೀಡಿತ್ತು. 


ತಂಪಾದ ಆಹ್ಲಾದಕರ ವಾತಾವರಣ.  ಮಳೆಗಾಲದ  ಮುಂಗಾರಿನ ದಿನಗಳು. ಮೋಡ ಅವರಿಸಿದ್ದರು ಸೆಕೆ ಮತ್ತು ಉಷ್ಣಾಂಶ ತುಸು ಹೆಚ್ಚೇ ಇತ್ತು.  

ಕಿರಿದಾದ ಕಣಿವೆ, ಸಣ್ಣಗೆ ಹರಿಯುವ ಝರಿ ...ಅದರಲ್ಲೇ ನೆಡೆದು ಕೊಂಡು ಧಾಟಿ ಸಾಗುತ್ತ ಇದ್ದ ನಮ್ಮ ಪಯಣ...  ಇದರ ಮಧ್ಯ ...ಜಿಂಕೆ ,,,ಸಾರಂಗ ಮುಂತಾದ ಕಾಡು ಪ್ರಾಣಿಗಳ ಚಲನ ವಲನ ಹತ್ತಿರದಿಂದ ಕಾಣುತ್ತ ಇತ್ತು...

ನಮ್ಮ ಜೊತೆ ಫಾರೆಸ್ಟ್ ಗಾರ್ಡ್ ಮತ್ತು RFO ಕೂಡ ಜೊತೆಗೆ ಇದ್ದರು..   ನೆಡೆದು ಕೊಂಡು ಹೋಗುತ್ತಾ ಅವರ ಜೊತೆ ಇಲ್ಲಿನ ಕಾಡು ಮತ್ತು ಪರಿಸರದ ಅವರ ಅನುಭವ . ಹೊಸ ಹೊಸ  ತರಹದ ಚಿಟ್ಟೆಗಳು, ಕಾಡಿನ ಮರ, ಗಿಡಳ ಪರಿಚಯ   ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಜಿಮ್ ಕಾರ್ಬೆಟ್ ಎನ್ನುವವ ಸುಂದರ ಕಾಡಿನ  ನೈಜ ಸೊಬಗನ್ನು ನೋಡುತ್ತಾ ಸಾಗುತ್ತಲಿತ್ತು ನಮ್ಮ ಪಯಣ..

ಅಷ್ಟರಲ್ಲಿ ನಮ್ಮ ಜೊತೆಗಾರ ಮುನೀಶ್ ಅವರು ಕೆಲವು ಅಪರೂಪದ ಪಕ್ಷಿಗಳ ಚಲನ ವಲನ ಗಮನಿಸಿ ಅಲ್ಲೇ ಸ್ವಲ್ಪ ಒಳಗೆ ಕಡಿದಾದ ಕಣಿವೆ ಇಳಿದು ಅದನ್ನು ಹುಡುಕಿ ಹೊರಟೆವು...

ಅಬ್ಬಾ ... ಹಸಿರು, ಹಳದಿ ಕಪ್ಪು ಬಣ್ಣದ ಲಾಂಗ್ ಟೈಲ್ಡ್ ಬ್ರಾಡ್ ಬಿಲ್(Long-tailed broadbill)

ಹಕ್ಕಿ ಮೊದಲ ಬಾರಿ ಕಂಡಾಗ ಅಲ್ಲೇ ಕೂಗಬೇಕು ಅನ್ನಿಸಿತು... ಅಷ್ಟು ಹತ್ತಿರ ದಿಂದ ಅವುಗಳ ಚಲನ ಆಟೋಟ. ನೋಡುತ್ತಾ ಮೈಮರೆತು ನಿಂತಿದ್ವಿ..


 ಅದಾಗಲೇ ಪಕ್ಷಿಗಳ ಲೋಕದಲ್ಲಿ ಮಿಂದು ತೇಲುತ್ತ ಹೊಸ ಹೊಸ ಪಕ್ಷಿಗಳ ಪರಿಚಯ ಮಾಡಿಕೊಳ್ಳುತ್ತ  ಒಂದು ಎಂಟರಿಂದ ಹತ್ತು km  ನೆಡೆದು ದಟ್ಟ ಕಾಡಿನ ನಡುವೆ ತುಂಬಾ ಒಳಗೆ ಬಂದಿದ್ವಿ...

ನಮ್ಮ ಜೊತೆ ತಂದಿದ್ದ ಬಿಸ್ಕಿತ್ತ್ ಮತ್ತು ನೀರು ಕುಡಿದು ಒಂದು ಕಡೆ ದಣಿವಾರಿಸಿಕೊಳ್ಳೋಣ ಎಂದು ಕುಳಿತೆವು.. 

ಅಷ್ಟರಲ್ಲಿ ನಮ್ಮ ಜೊತೆ ಬಂದಿದ್ದ ಫಾರೆಸ್ಟ್ ಗಾರ್ಡ್ "ಸಾರ್ ಅಲ್ಲೇ ನನಗೆ ಎರಡು ವರ್ಷದ ಕೆಳಗೆ ಹುಲಿ ದಾಳಿ ಮಾಡಿದ್ದೂ ಅಂತ ಜಾಗ ತೋರಿಸಿದ"  ನಾನು ನೀರು ಕುಡಿತಾ  ಇದ್ದವನು  ಚೆಕ್ ಅಂತ  ಎದ್ದು ಇವ ಏನು ಹೇಳುತ್ತಾ ಇದ್ದಾನೆ...ಏನಾದ್ರು ತಮಾಷೆ ಮಾಡ್ತಾ ಇದ್ದಾನ ಎಂದು ಅವನ ಪಕ್ಕ ಹೋಗಿ ಕುಳಿತು ನಿದಾನವಾಗಿ ಕೇಳಿದೆ...   ಅ ಪುಣ್ಯಾತ್ಮನ ಹುಲಿ ಜೊತೆಗಿನ ದಾಳಿ ಮತ್ತು ಸೆಣೆಸಾಟದ ಕತೆ ಕೇಳುತ್ತಾ  ಮೈ ಸಣ್ಣಗೆ ನಡುಗಲು ಶುರುವಾಯಿತು..

"ಅಲ್ಲಿ ಕೈ ತೋರಿಸಿ ... ಸಾರ್ ಅಲ್ಲಿ ನೋಡಿ ಅದೇ ಜಾಗ... ಅಲ್ಲಿ ಗುಡ್ಡದ ಮೇಲೆ ಕಾಣುತ್ತ ಇದೆ ಅಲ್ವ ಅದೇ ಜಾಗ ಸಾಬ್ ... ನಾವೆಲ್ಲಾ ಒಟ್ಟಿಗೆ ಬೀಟ್ ಗೆ ಬಂದಿದ್ದೆವು.. ನಮ್ಮ ಪಾಡಿಗೆ ನಾವು ಮಾತನಾಡುತ್ತ ಸಾಗುತ್ತ ಇದ್ದಾಗ ಅದೆಲ್ಲಿ ಇತ್ತೋ ಹುಲಿ ಎದುರು ಗಡೆ ಇಂದ ನೇರವಾಗಿ ನಮ್ಮ ಮೇಲೆ ಎಗರಿತು ಸಾರ್.. ಬರಿ ಒಂದು  ಹತ್ತು ಸೆಕೆಂಡ್..  ಅಷ್ಟೇ ನಾನು ನನ್ನ ಕೈನಲ್ಲಿ ಇದ್ದ ಕೋಲು ಅಡ್ಡ ವಾಗಿ ಹಿಡ್ಕೊಂಡು ಮುಂದೆ ತಳ್ಳಿದೆ... ನಮ್ಮ ಜೊತೆ ಬಂದೂಕು, ಕೋವಿ  ಎಲ್ಲಾ  ಇದ್ದರು ಏನು ಮಾಡಲು ಆಗಲಿಲ್ಲ.. ಅದು ಯಾವ ಮಾಯದಲ್ಲಿ ಬಂತೋ ಸಾರ್... ಬಂದಿದ್ದೆ ನನ್ನನ್ನು ಟಾರ್ಗೆಟ್ ಮಾಡಿತು..ಅಂತ ಆವಾಗಿನ ಹುಲಿ ಅಟ್ಯಾಕ್ ಅದ  ಫೋಟೋ  ತೋರಿಸುತ್ತಾ  ತನ್ನ ಮಾತು ಮುಂದುವರಿಸಿದ..   ಹಾಗೆ ಹೇಳುವಾಗ ಅವತ್ತಿನ ಆ ಭಯಾನಕ ದೃಶ್ಯ ಅವನ ಕಣ್ಣ ಮುಂದೆ ಬಂದಿರಬೇಕು.. ಇನ್ನು ಹೆದರಿಕೊಂಡೇ ಹೇಳುತ್ತಾ ಇದ್ದ ರೀತಿ ಅವನ ಮುಖ ದಲ್ಲಿ ಕಾಣಿಸುತ್ತ ಇತ್ತು..   " ಆಮೇಲೆ ನಮ್ಮ ಜೊತೆ ಇದ್ದ ಐದು ಜನ ಕೋಲು ಕಟ್ಟಿಗೆ ಇಂದ ಜೋರಾಗಿ ಗಲಾಟೆ ಮಾಡಿ ಅದರ ಮೇಲೆ ಎರಗಿದೆವು ಸಾರ್.  ಅಷ್ಟರಲ್ಲಿ ನನ್ನ ತಲೆ ಮತ್ತು ಭುಜಕ್ಕೆ ಅ ಹುಲಿ ತನ್ನ ಪಂಜಾ ಇಂದ ಹೊಡೆದು ಗಯಾ ಮಾಡಿತ್ತು... ಅಷ್ಟೇ ಸಾರ್ ನನಗೆ ಗೊತ್ತಾಗಿದ್ದು.. ಆಮೇಲೆ ಬರಿ ಅರ್ಧ ಜೀವ ಆಗಿತ್ತು ಅಂತ ಭಯದಿಂದಲೇ ಹೇಳಿದ್ದ.. ಇಲ್ಲಿ ಹುಲಿಗಳು ತುಂಬಾ ಭಯಂಕರ .. ಖತರ್ನಾಕ್  ಸರ್..ಯಾವಾಗ ಹೇಗೆ ಬಂದು ಮೇಲೆ ಎಗರುತ್ತವೋ ಗೊತ್ತಾಗೋದೇ ಇಲ್ಲ..  

ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಇನ್ನೊಬ್ಬ ಫಾರೆಸ್ಟ್  ಗಾರ್ಡ್ " ನಾನೇ ರೋಡ್ ತನಕ ಹೆಗಲ ಮೇಲೆ ಹಾಕಿಕೊಂಡು ಏಳು ಎಂಟು km  ತನಕ ಕರ್ಕೊಂಡ್  ಹೋಗಿ ಹಾಸ್ಪಿಟಲ್ ಗೆ ಸೇರಿಸಿದೆವು ಸಾರ್.. ಹಾಸ್ಪೆಟಲ್ ಕೂಡ ಇಲ್ಲಿಂದ ಮೂವತ್ತು KM ದೂರದ ಒಂದು ಊರಿನಲ್ಲಿ ಇದೆ ಅಂತ ಅವನ ಸ್ಟೋರಿ ಹೇಳ್ತಾ ಇದ್ದ.. ಹೆಂಗೋ ಬಚಾವ  ಅದ  ಇವನು ಅಂತ ಅವನನ್ನು ಛೇಡಿಸಿ .. ನನ್ನಿಂದಲೇ ಇವ ಬಚಾವ್ ಆಗಿದ್ದು ಅಂತ ಅವನನ್ನು ರೇಗಿಸುತ್ತಾ ಇದ್ದ...

ಇದರ ಜೊತೆ ಹುಲಿ ಅಟ್ಯಾಕ್ ಮಡಿದ ಮೋಹನ್ ದಾಸ್  (ಹೆಸರು ಬದಲಿಸಲಾಗಿದೆ) ಅವರ ರಕ್ತ ಸಿಕ್ತ  ಫೋಟೋ .  ಹಾಸ್ಪಿಟಲ್ ನಲ್ಲಿ ಟ್ರೀಟ್ಮೆಂಟ್ ಮಾಡುತ್ತ ಇದ್ದ ಫೋಟೋ ನೋಡಿ  ನನ್ನ ಬೆನ್ನಿನಲ್ಲಿ ಸಣ್ಣ ನೆಡುಕ ಶುರವಾಗಿತ್ತು...

ಅಲ್ಲ... ನಾನು ನಿದಾನಕ್ಕೆ ಅವರನನ್ನ ಕೇಳಿದೆ... ಅಲ್ಲಕಂಡ್ರಪ್ಪ ..  ಈ ವಿಷಯನ.. ಮತ್ತೆ ಸ್ಟೋರಿನ ಮೊದಲೇ ಯಾಕೆ ಹೇಳಲಿಲ್ಲ ?  ಇಷ್ಟು ದೂರ ಅಂದರೆ ಒಂದು ಎಂಟು km ಕಾಡಿನಲ್ಲಿ  ಕರ್ಕೊಂಡ್ ಬಂದು  ...ನಾವು ನೆಡೆದಾಡುತ್ತ  ಖುಷಿ ಪಟ್ಕೊಂಡ್ ಹಕ್ಕಿ ಪಕ್ಷಿ ಅಂತ  ಇಲ್ಲಿ ತನಕ ಏನು ಭಯ ಇಲ್ಲದಿರ ಬಂದಿದ್ದೇವೆ.. ಇವಾಗ ಹೇಳ್ತಾ ಇದ್ದಿರಲ್ಲ...ಅಂತ ಸರಿಯಾಗಿ ಬೈಕೊಂಡ್... ಅಣ್ಣ ಇನ್ನು ಮುಂದೆ ಏನು ನೋಡೋದು ಬೇಡ... ದಯವಿಟ್ಟು ವಾಪಾಸ್ ಬೇಗ  ಬೇಗ ನಮ್ಮ ಫಾರೆಸ್ಟ್  ಗೆಸ್ಟ್ ಹೌಸ್ ಕಡೆ ಹೋಗೋಣ ಎಂದು ನಾನು ಮತ್ತು ಮುನೀಶ್ ಎದ್ದು ನಿಂತೆವು...  ಅವರು ನಮ್ಮ ನೋಡಿ ನಗ್ತಾ ಇದ್ರು..

ದೇವರಾಣೆ...ಇಷ್ಟೆಲ್ಲ ಸೀನ್ ಇದೆ ಅಂತ ಮೊದಲೇ ಗೊತ್ತಿದ್ದರೆ ನಿಜವಾಗ್ಲೂ ಇಲ್ಲಿ ತನಕ ನೆಡ್ಕೊಂಡ್  ಬರೋ ಸಾಹಸ ಮಾಡ್ತಾ ಇರಲಿಲ್ಲ ಅಂತ ಕಾಣುತ್ತೆ... ಅಯ್ಯೋ ಪಾಪಿಗಾಳ  ಎಂದು ಕೊಂಡು ಬೇಗ ಬೇಗ ನಮ್ಮ ಗೆಸ್ಟ್ ಹೌಸ್ ಕಡೆ ಹೆಜ್ಜೆ ಹಾಗಿದೆವು...

ವಾಪಾಸ್ ಬರೋವಾಗ ಯಾವ ಬರ್ಡಿಂಗ್ ಕೂಡ ಇಲ್ಲ.. ಒಂದು ಜಿಂಕೆ ಅಥವಾ ಬಾರ್ಕಿಂಗ್ ಡೀರ್ ಕೂಗುವಿಕೆ ಕೇಳಿದರೆ ಸಾಕು..  ಹುಲಿ ನೇ ಕಣ್ಣಿಗೆ ಕಾಣಿಸುತ್ತ ಇತ್ತು...

ಅಂತೂ ಶಾರ್ಟ್ ಕಟ್ ರೂಟ್ ನಿಂದ ಫಾರೆಸ್ಟ್ ನ ಇನ್ನೊಂದ್ ಕಡೆ ಇಂದ ಬೇಗ ಬೇಗ ನೆಡೆದು ರೋಡ್ ನೋಡಿದಾಗ ಮನಸ್ಸಿಗೆ  ಸಮಾಧಾನ ಆಯಿತು .....

ಅಷ್ಟೇ ವಾಪಾಸ್ ಬಂದು  ಊಟ ಮಾಡುವ ವರೆಗೂ ಅದೇ ಗುಂಗಿನಲ್ಲಿ ಇದ್ದೆವು.. ಆಮೇಲೆ ಮದ್ಯಾನ ಮತ್ತೆ ನಮ್ಮ ಹೊಸ ಹುಡುಕಾಟ ಶುರು.. ಆದರೆ ಇವಾಗ ಮೇನ್ ರೋಡ್ ಸಮೀಪ ಕಾಲು ದಾರಿ ನಲ್ಲೇ  ನೆಡೆದು ಕೊಂಡು ಹೋಗುವ ಹಾಗೆ ನಮ್ಮ ಪ್ಲಾನ್ ಚೇಂಜ್ ಮಾಡಿಕೊಂಡೆವು.. :-) 

.... 

ಮುಂದುವರಿಯುವುದು...   

ಬೆಳಿಗ್ಗೆ ಸರ್ವೇ ನಲ್ಲಿ ಸಿಕ್ಕ ಅಪರೂಪದ ಹಿಮಾಲಯ ತಪ್ಪಲಿನ ಪಕ್ಷಿಗಳು...



Black-naped monarch  with Nesting 

Crested kingfisher

Crimson sunbird

Himalayan bulbul

Yellow-footed green pigeon


Scarlet minivet


Black bulbul


Asian barred owlet
Common green magpie