Monday, September 20, 2021

ಮಕ್ಕಳು - ಪರಿಸರ - ಪಕ್ಷಿಲೋಕ - ಪುಸ್ತಕಮನೆ

ಮಕ್ಕಳು - ಪರಿಸರ - ಪಕ್ಷಿಲೋಕ - ಪುಸ್ತಕಮನೆ 

 

ಮಕ್ಕಳ ಜೊತೆ ಒಂದು ದಿನದ ಪರಿಸರ ಪ್ರಕೃತಿ ಹಾಗೂ ಪಕ್ಷಿಗಳ ಬಗ್ಗೆ ನಮ್ಮ ಪ್ರವಾಸ ಪಕ್ಷಿಗಳ ಅದ್ಭುತ ತಾಣ ಎನಿಸಿರುವ ರಂಗನತಿಟ್ಟು ಪಕ್ಷಿಧಾಮ ಹಾಗೂ ಅದರ ಪಕ್ಕದಲ್ಲೇ ಇರುವ ಕರಿಘಟ್ಟ ಎನ್ನುವ ಬೆಟ್ಟದ ಮೇಲೆ ಚಾರಣ ಎಂದು ನಿಗದಿಯಾಗಿತ್ತು.

ಸೆಪ್ಟೆಂಬರ್ 19 ಭಾನುವಾರ ಬೆಳಗ್ಗೆ ಆರು ಗಂಟೆಗೆ ನಮ್ಮ ಪರಿಸರ ಪ್ರೇಮಿಗಳ ಪಯಣ (12 ಮಕ್ಕಳು ಹಾಗೂ ಕೆಲವರ ತಂದೆ-ತಾಯಿಗಳು ಸೇರಿ 23ಜನ) ಶುರುವಾಯಿತು. ಜ್ಞಾನಭಾರತಿ ಬಡಾವಣೆಯಲ್ಲಿರುವ ನಮ್ಮ ಮನೆಯ ಹತ್ತಿರದಿಂದಲೇ ಮೊದಲ ಪಾಯಿಂಟ್ ಇಂದು ನಿಗದಿಪಡಿಸಿದ ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಹೇಳಿದ ಸಮಯಕ್ಕೆ ಸರಿಯಾಗಿ ಅಂದರೆ 05:45 ಬೆಳಗ್ಗೆ ಬಂದು ಸೇರಿದರು.

ಮಕ್ಕಳೆಲ್ಲ ಅಷ್ಟು ಬೇಗನೆ ಎದ್ದು ಬೇಗ ಬೇಗ ರೆಡಿಯಾಗಿ ಈ ಪರಿಸರ ಪ್ರವಾಸಕ್ಕೆ ತುಂಬಾ ಉತ್ಸಾಹದಿಂದ ಬಂದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಮಕ್ಕಳು ಲೇಟಾಗಿ ಬರಬಹುದೆಂದು ಅರ್ಧಗಂಟೆ ಬಫರ್ ಟೈಮ್ ಇಟ್ಟುಕೊಂಡಿದ್ದೆ .. ಆದರೆ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಇಂತಹ ಪ್ರವಾಸದಲ್ಲಿ ತಮ್ಮ ಉತ್ಸಾಹ ಹೇಗಿದೆಯೆಂದು ತೋರಿಸಿದರು. 

 ದಿಯಾ ಪುಟ್ಟಿ, ಪ್ರೇಕ್ಷಾ, ದರ್ಶಲ್ , ನಾಗಶ್ರೀ ವಿದ್ಯಾ, ನಿಶ್ಚಿತ್, ತನ್ಮಯ್, ಪುನೀತ್, ಅದಿತಿ ಮತ್ತು ವಿಶೇಷ್, ಲಕ್ಷ್  .... ಎಲ್ಲರೂ ನಮ್ಮ ಮನೆಯ ಮುಂದೆ ಸೇರಿಯಾಗಿತ್ತು ಇದರ ಜೊತೆಗೆ ನನ್ನ ಮಕ್ಕಳಾದ ಪ್ರಣವ್ ಮತ್ತು ತೀಕ್ಷ್ಣ ಅವರು ಕೂಡ ರೆಡಿಯಾಗಿ ಎಲ್ಲರ ಜೊತೆ ಒಂದಾದರು




ಆದರೆ ನಮ್ಮನ್ನು ಕರೆದುಕೊಂಡು ಹೋಗಬೇಕೆಂದು ಇದ್ದ ಮಿನಿ ಬಸ್ ಅದೇ ಸ್ವಲ್ಪ ಲೇಟ್ ಆಗಿತ್ತು, ಜಾಸ್ತಿ ಹೊತ್ತೇನೂ ಅಲ್ಲ ಐದೂವರೆಗೆ ಬರಬೇಕಾದ ಬಸ್ಸು ಒಂದು ಇಪ್ಪತ್ತು ನಿಮಿಷ ತಡವಾಗಿ ಬಂದಿತ್ತು. ಅದಾಗಲೇ ಎಲ್ಲ ಮಕ್ಕಳು ಅವರ ತಂದೆ ತಾಯಿಯರು ಬಂದು ಸೇರಿದ್ದು, ಬಸ್ ಬಂದಾಗ ತಡಮಾಡದೆ ಒಂದು ಸಣ್ಣ ಪೂಜೆಯನ್ನು ಮುಗಿಸಿ ಎಲ್ಲರೂ ಮಿನಿ ಬಸ್ ಅನ್ನೋ ಹತ್ತಿದೆವು.

ಅಕ್ಷೋಭ್ಯ ಹಾಗು ಅವರ ಅಪ್ಪ ಅಮ್ಮ ಕೆಂಗೇರಿ ಬಳಿ ಸೇರಿಕೊಂಡರು,  

ಶಾರ್ವಿ  ಮತ್ತು ನವೀನ್  ಕುಟುಂಬ ಬಿಡದಿ ಬಳಿ ನಮ್ಮ ಜೊತೆ ಸೇರಿಕೊಂಡರು.   ಅವರು ಬೇರೆ  ಕಾರಿನಲ್ಲಿ ನಮ್ಮ ಹಿಂದೆಯೇ ಬಂದಿದ್ದರು..

ಭಾನುವಾರವಾದ ಕಾರಣ ಮೈಸೂರು ಕಡೆಗಿನ ಟ್ರಾಫಿಕ್ ಸ್ವಲ್ಪ ಹೆಚ್ಚೇ ಇದ್ದಿತು. ಬಿಡದಿ ಸಮೀಪ ಶಿವು ಸಾಗರ ಎಂಬ ಕಡೆ ಎಲ್ಲಾ ಮಕ್ಕಳು ಹಾಗೂ ದೊಡ್ಡವರು ಬಿಸಿಬಿಸಿ ತಟ್ಟೆ ಇಡ್ಲಿ ಹಾಗೂ ಉದ್ದಿನವಡೆಯ ಸ್ವಾದವನ್ನು ಸವಿದು ಬೆಳಗಿನ ಉಪಹಾರವನ್ನು ಮುಗಿಸಿ, ಮುಂದಿನ ಡೆಸ್ಟಿನೇಷನ್ ಕರಿ ಘಟ್ಟಕ್ಕೆ ನಮ್ಮ ಪಯಣ ಸಾಗಿತು..

ಬಿಸಿಬಿಸಿ ತಟ್ಟೆಇಡ್ಲಿ ಯ ಉಪಹಾರದ ಮಹಿಮೆ ಎಲ್ಲಾ ಚಿಕ್ಕಮಕ್ಕಳ ಜೋಶ್ ತುಂಬಾ ಜೋರಾಗಿ ಇತ್ತು.

ಮೊದಲೇ ಎಲ್ಲರಿಗೂ ಹೇಳಿದಾಗೆ 10 ಕ್ವಿಜ್ ಗಳನ್ನು ಪ್ರಕೃತಿ ಬಗ್ಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಬರೆದುಕೊಂಡು ಬಂದಿದ್ದರು.

ಬಿಡದಿ ಬಿಟ್ಟಮೇಲೆ ಕರಿಘಟ್ಟ ಕ್ಕೆ ಹೋಗುವ ತನಕ ಇವರ ಪ್ರಶ್ನಾವಳಿಗಳ ಕಾರುಬಾರು, 12 ಮಕ್ಕಳನ್ನು ಹಾಗೂ ಬಂದಿದ್ದ ದೊಡ್ಡವರನ್ನು ಸೇರಿಸಿ ಮೂರು ಗುಂಪುಗಳನ್ನಾಗಿ ಮಾಡಿ ರಸಪ್ರಶ್ನೆ ವಿನಿಮಯ ಶುರುವಾಗಿತ್ತು..

ಎಲ್ಲಾ ಮಕ್ಕಳು ತುಂಬಾ ಕಾಳಜಿ ವಹಿಸಿ ಕೆಲವೊಂದು ಕಷ್ಟಕರವಾದ ಕ್ವಿಜ್ ಗಳನ್ನು ಬರೆದುಕೊಂಡು ಬಂದಿದ್ದರು. ಒಂದೊಂದು ಗುಂಪಿಗೆ ಎರಡು ಪ್ರಶ್ನೆಗಳು ... ಹಕ್ಕಿಗಳ ಬಗ್ಗೆ ಸೋಲಾರ್ ಸಿಸ್ಟಮ್ ಬಗ್ಗೆ ಹಾಗೂ ಕೆಲವೊಂದು ರಿಡಲ್ ಗಳು... ಪ್ರಶ್ನಾವಳಿಗಳನ್ನು ಕೇಳುತ್ತಾ ತಮ್ಮ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಾ ಖುಷಿಯಿಂದ ಸಾಗಿದೆವು


ಕ್ವಿಜ್  ನಲ್ಲಿ ತಲ್ಲೀನ ರಾಗಿರುವ ಮಕ್ಕಳು 

ಕರಿಘಟ್ಟ ತಲುಪುವಹೊತ್ತಿಗೆ 9:30 ಆಗಿತ್ತು ಬೆಟ್ಟದಮೇಲೆ ಹೋಗಿ ನಮ್ಮ ಮಿನಿ ಬಸ್ಸಿನಲ್ಲಿ ನಿಲ್ಲಿಸಿ. ಕರಿಘಟ್ಟದ ವ್ಯೂ ಪಾಯಿಂಟ್ ಹಾಗೂ ಸುತ್ತಮುತ್ತ ಪರಿಸರದಲ್ಲಿ ಓಡಾಡಿಕೊಂಡು ಕೆಲವೊಂದು ವಿಶೇಷ ಪಕ್ಷಿಗಳಾದ, ನೀಲಿ ನೊಣ ಹಿಡುಕ, ಮಟಪಕ್ಷಿ, ರಾಜಪಕ್ಷಿ, ಸರ್ಪೆಂಟ್ ಈಗಲ್, ಸನ್ ಬರ್ಡ್ಸ್, ಲಾಫಿಂಗ್ ಡವ್, ಮಂಗಟ್ಟೆ ಇನ್ನು ಮುಂತಾದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ತಾವು ತಂದಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿದು ಖುಷಿಪಟ್ಟರು.











ನನ್ನ ಮಗಳು Teekshna (ತೀಕ್ಷ್ಣ)  ಬರೆಯುವುದರಲ್ಲಿ ತಲ್ಲೀನರಾಗಿ ಇರುವುದು 


ಕರಿಘಟ್ಟದ ದೇವಸ್ಥಾನ ತುಂಬಾ ರಶ್ ಇದ್ದ ಕಾರಣ ಹೋಗಲಾಗಲಿಲ್ಲ. ಹಾಗೆ ಬಿಸಿಲು ಜಾಸ್ತಿ ಇರುವ ಕಾರಣ ಆದಷ್ಟು ಬೇಗ ರಂಗನತಿಟ್ಟಿನ ಕಡೆ ಮುಖ ಮಾಡಿದೆವು.

ಪಕ್ಷಿಕಾಶಿ ರಂಗನತಿಟ್ಟು ತಲುಪಿದಾಗ 10 ಮುಕ್ಕಾಲಿನ ಸಮಯ. ಮೊದಲಿಗೆ ನಮ್ಮ ಭಾರತದ ಹಕ್ಕಿಗಳ ಮನುಷ್ಯ ಅಂದರೆ ಬರ್ಡ್ ಮ್ಯಾನ್ ಎಂದು ಪ್ರಸಿದ್ಧರಾಗಿರುವ ಡಾಕ್ಟರ್ ಸಲೀಮ್ ಅಲಿ ಸರ್ ಅವರ ಮ್ಯೂಸಿಯಂಗೆ ಅಲ್ಲಿ ಚೆನ್ನಾಗಿ ವಿವರಣೆಯೊಂದಿಗೆ ಅರ್ಥಪೂರ್ಣವಾದ ಮಾಹಿತಿಗಳನ್ನು ಚಿಕ್ಕ ಮಕ್ಕಳು ಹಾಗೂ ದೊಡ್ಡವರು ನೋಡಿ ಹಿಡಿದುಕೊಂಡರು.. ಒಂದು ಕಡೆಯಿಂದ ಒಂದು ಬಟನ್ ಒತ್ತಿದರೇ ಸಾಕು ಆ ಹಕ್ಕಿಗಳ ಕೂಗು ಕೇಳಿಸುತ್ತಾ ಗಿದ್ದ ಮರದ ಹತ್ತಿರ.. ಚಿಕ್ಕ ಮಕ್ಕಳು ಕುತೂಹಲದಿಂದ ಅದನ್ನು ಒತ್ತಿ ಒತ್ತಿ ಬೇರೆಬೇರೆ ಹಕ್ಕಿಗಳ ಕೂಗುಗಳನ್ನು ಹೇಳುತ್ತಾ ಇದ್ದರು... ಹಾಗೆ ರಂಗನತಿಟ್ಟು ಮತ್ತು ಅಲ್ಲಿ ಬರುವ ವಲಸೆ ಹಕ್ಕಿಗಳ ಹಾಗೆ ಅಲ್ಲಿ ನೀರಿನಲ್ಲಿ ವಾಸಿಸುವ ಹಕ್ಕಿಗಳು ಹಾಗೂ ಅವುಗಳ ಕೊಕ್ಕಿನ ರಚನೆಗಳು ಅವುಗಳ ಪಾದಗಳ ರಚನೆಗಳು ಇವುಗಳನ್ನೆಲ್ಲಾ ತಿಳಿದುಕೊಂಡು ತುಂಬಾ ಖುಷಿ ಪಟ್ಟರು.













ಅಲ್ಲಿಂದ ಹೊರಗೆ ಬರುತ್ತಿದ್ದ ಹಾಗೆ ಕೆಂಬರಲು ಅಂದರೆ ಬ್ಲಾಕ್ ಹೆಡೆಡ್ ಐಬಿಸ್ ಇವುಗಳ ಹಾರಾಟ ತಮ್ಮ ಮರಿಗಳಿಗೆ ಆಹಾರವನ್ನು ತಿಳಿಸುತ್ತಿದ್ದ ರೀತಿ ... ಕಾವೇರಿ ನದಿಯ ವಿಹಂಗಮ ನೋಟ ಇವುಗಳನ್ನೆಲ್ಲ ನೋಡಿ ಚಿಕ್ಕ ಮಕ್ಕಳು ಹಾಗು ದೊಡ್ಡವರು ಪಟ್ಟ ಖುಷಿ ಅಷ್ಟಿಷ್ಟಲ್ಲ. ನೀರು ಹೆಚ್ಚಿದ್ದ ಕಾರಣ ಬೋಟಿಂಗ್ ಸಾಧ್ಯವಾಗಲಿಲ್ಲ. ಆದರೂ ಒಂದು ಗಂಟೆಗಳ ಕಾಲ ದಟ್ಟವಾಗಿ ಹಬ್ಬಿರುವ ಮರಗಳ ಮಧ್ಯೆ ನಡೆದಾಡುತ್ತ ಅಲ್ಲಿರುವ ಪಕ್ಷಿಗಳನ್ನು ನೋಡುತ್ತಾ ಮರ ಗಿಡಗಳನ್ನು ಮುಟ್ಟುತ್ತಾ... ಖುಷಿಯಿಂದ ಒಬ್ಬರಿಗೊಬ್ಬರು ಆಟವಾಡುತ್ತಾ ಸಾಗುತ್ತಿದ್ದರು ...

ಒಂದು ಗಂಟೆ ಹೊತ್ತಿಗೆ ಎಲ್ಲರ ಹೊಟ್ಟೆಯು ತಾಳ ಹಾಕುವುದಕ್ಕೆ ಶುರುಮಾಡಿತ್ತು .... ಮೊದಲೇ ನಾನು ನಿರ್ಧರಿಸಿದ್ದ ಹಾಗೆ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ಹತ್ತಿರ ಇರುವ ತೋಟದಮನೆ ಎಂಬಲ್ಲಿಗೆ ಹೋದೆವು.

ಅಪ್ಪಟ ಹಳ್ಳಿಮನೆಯ ಸೊಗಡಿನ ಜಾಗ ಮರಗಿಡಗಳ ಮಧ್ಯೆ ಕುಳಿತು ಊಟ ಮಾಡುವ ಸಮಯ ಎಲ್ಲರಿಗೂ ಇಷ್ಟವಾಯಿತು. ತುಂಬಾ ಚಿಕ್ಕದಾದ ಹಾಗೂ ಅಚ್ಚುಕಟ್ಟಾಗಿ ಇರುವ ತೋಟದ ಮನೆಯೆಂಬ ಮನೆ ಹೋಟೆಲ್ ಹಾಗೂ ಇಲ್ಲಿನ ಆಹಾರಗಳು ಎಲ್ಲರಿಗೂ ತುಂಬಾ ರುಚಿಸಿದವು ... ಒಂದೆರಡು ಗಂಟೆಗಳ ಕಾಲ ಇಲ್ಲೇ ಕಳೆದು ಊಟ ಮುಗಿಸಿ ಮತ್ತೊಂದು ಅದ್ಭುತ ಪ್ರಪಂಚಕ್ಕೆ ನಮ್ಮ ಮಕ್ಕಳನ್ನು ಕರೆದುಕೊಂಡು ಹೋದೆ.



ಪ್ರಕೃತಿಯ ಮಡಿಲಲ್ಲಿ ಹೊಟ್ಟೆ ಹಸಿದಾಗ ಮಾಡುವ ಊಟ ಆಹಾ ಹಾ ......   ತೋಟದ ಮನೆ ಯಲ್ಲಿ ಮನೆ ಸೊಗಡಿನ ಊಟ 



ಅಂಕೇಗೌಡರ ಪುಸ್ತಕ ಮನೆ 

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಇವುಗಳ ಸೇರ್ಪಡೆಗೆ ಹತ್ತಿರವಿರುವ ಸುಮಾರು 18 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವ ಏಕ ವ್ಯಕ್ತಿಯ ಸಾಧನೆ ಎನಿಸಿರುವ ಶ್ರೀಯುತ ಅಂಕೇಗೌಡರ ಪುಸ್ತಕದ ಮನೆಗೆ ಮಕ್ಕಳು ಕಾಲಿಟ್ಟಿದ್ದೇ ತಡ ಎಲ್ಲರನ್ನೂ ಆಶ್ಚರ್ಯ ಕುತೂಹಲ ಮನೆಮಾಡಿತ್ತು.

ಮೊದಲೇ ನಾನು ಶ್ರೀಯುತ ಅಂಕೆ ಗೌಡರಿಗೆ ನಮ್ಮ ಮಕ್ಕಳ ಜೊತೆಗೆ ಬರುವುದನ್ನು ತಿಳಿಸಿದೆ, ಅವರು ಯಾವುದೋ ಒಂದು ಸನ್ಮಾನವನ್ನು ಬೆಳಿಗ್ಗೆ ಮುಗಿಸಿ ಆದಷ್ಟು ಬೇಗ ಇಲ್ಲಿಗೆ ಬಂದು ಸೇರಿದ್ದರು. ನಮ್ಮ ಅದೃಷ್ಟ ಅವರೇ ನಮ್ಮ ಜೊತೆಗಿದ್ದು ತಮ್ಮ ಪುಸ್ತಕ ಬಂಡಾರ ರಾಶಿಯನ್ನು ಎಲ್ಲಾ ಮಕ್ಕಳಿಗೂ ತೋರಿಸುತ್ತಾ ಹಾಗೂ ತಮ್ಮ ಹತ್ತಿರ ವಿದ್ದ  ಸ್ಟ್ಯಾಂಪ್ಮ ತ್ತು ಹಳೆ ಕಾಲದ ನಾಣ್ಯಗಳ ಸಂಗ್ರಹವನ್ನು.. ತುಂಬಾ ಹಳೆಯದಾದ ಇಂಟರ್ನ್ಯಾಷನಲ್ ಪುಸ್ತಕಗಳನ್ನು ನೋಡುವಾಗ ಎಲ್ಲಾ ಮಕ್ಕಳ ಮೈಗಳು ಜುಮ್ಮೆಂದವು ....

ಎಲ್ಲಾ ಮಕ್ಕಳನ್ನು ಕೂಡಿಸಿಕೊಂಡು ನಿಮಗೆ ಏನು ಅನಿಸಿತು ಹಾಗೂ ಏನಾದ್ರೂ ಪ್ರಶ್ನೆಗಳನ್ನು ಕೇಳುವುದಿದ್ದರೆ ಕೇಳಿ ಎಂದು ಅಂಕೆ ಗೌಡರು ಹೇಳಿದಾಗ ನಮ್ಮ ಗುಂಪಿನ ಒಂದೊಂದು ಮಕ್ಕಳು ಕೂಡ ತಮ್ಮ ಅನಿಸಿಕೆ ತಿಳಿಸಿ ಅಂಕೆ ಗೌಡರಿಗೆ ಪ್ರಶ್ನೆಗಳ ಸುರಿಮಳೆಗೈದರು... ಈ ಮಕ್ಕಳ ಸ್ಫೂರ್ತಿಯನ್ನು ಕಂಡು ಅಂಕೆ ಗೌಡರು ಕೆಲವೊಂದು ಆಶೀರ್ವಚನವನ್ನು ನೀಡಿ  ನಿಮಗೆ ಯಾವುದು ಬೇಕು ಆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಎಂದರು.. ಚಿಕ್ಕ ಮಕ್ಕಳು ತಮ್ಮ ಕೈಗೆ ಸಿಕ್ಕ ಕುತೂಹಲದ ಪುಸ್ತಕಗಳನ್ನು ತೆಗೆದುಕೊಂಡು ಅಂಕೇಗೌಡರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಖುಷಿಪಟ್ಟರು.


ಅಂಕೇಗೌಡರ ಜೊತೆ ನಮ್ಮ ತಂಡದ ಒಂದು ಚಿತ್ರ 

ಪುಸ್ತಕಗಳ ಸಮುದ್ರದಲ್ಲಿ ಈಜಾಡುತ್ತಾ ಇರುವ ಮಕ್ಕಳು ... ಒಂದೊಂದು ಹಳೆಯ ಪುಸ್ತಕ ಒಂದೊಂದು ಅಚ್ಚರಿ 










ಇಂಟರ್ನ್ಯಾಷನಲ್ ಎಡಿಷನ್ ಪುಸ್ತಕ ಅದ್ಬುತ ಮಾಹಿತಿ ಯುಕ್ತ raptors  ಗಳ  ಪರಿಚಯ 


ಬೆಂಗಳೂರಿಗೆ ವಾಪಸ್ ಬರುವಾಗ ಹೆಚ್ಚಿನ ಟ್ರಾಫಿಕ್ ಇರುತ್ತದೆಯೆಂದು ಆದಷ್ಟು ಬೇಗ ಅವರಿಗೆ ನಮ್ಮ ಸಣ್ಣ ಸನ್ಮಾನವನ್ನು ಮಾಡಿ ಹೊರಟೆವು.

ಬಿಸಿಲು ಹೆಚ್ಚಾಗಿದ್ದ ಕಾರಣ ಅಲ್ಲೇ ಹತ್ತಿರವಿದ್ದ ಕಬ್ಬಿನ ಹಾಲು ಹಾಗೂ ಗೋಲಿಸೋಡ ಗಳನ್ನು ಕುಡಿದು ಹೊಟ್ಟೆಯನ್ನು ತಂಪು ಮಾಡಿಕೊಂಡು ನಮ್ಮ ದಿನದ ಕಾರ್ಯಕ್ರಮವನ್ನು ಮುಗಿಸಿ ನಮ್ಮ ಪಯಣ ಮನೆಗಳ ಕಡೆ ಸಾಗಿತ್ತು.





ವಾಪಸ್ ಬರುವಾಗ ನಮ್ಮ ಜೊತೆ ಬಂದಿದ್ದ  DJ "ಯಶಸ್ವಿ "ಯವರು ಒಳ್ಳೆ ಒಳ್ಳೆಯ ಹಾಡುಗಳನ್ನು ಹಾಕಿ ಮಕ್ಕಳಿಗೆ ಕುಣಿಯಲು ಹೇಳಿದರು ಬರುತ್ತಾ ದಾರಿಯುದ್ದಕ್ಕೂ ಚಿಕ್ಕಮಕ್ಕಳ ಅಮ್ಮ ಆಯಾಸ ಗಳನ್ನು ಮರೆತು ಹಾಡಿಗೆ ಡಾನ್ಸ್ಅನ್ನು ಮಾಡುತ್ತಾ ಕುಣಿದು ಕುಪ್ಪಳಿಸುತ್ತಾ ಜಾಲಿ ಇಂದ ಬಂದು ಸೇರಿದೆವು.

ಒಂದು ಅರ್ಥ ಪೂರ್ಣ ಪರಿಸರ, ಪುಸ್ತಕ , ಪಕ್ಷಿ ಲೋಕ ಇವುಗಳ ಒಂದು ದಿನದ ನಮ್ಮ ಕಾರ್ಯಕ್ರಮ ಯಶಸ್ವಿ ಯಾಗಿ ಮುಗಿಯಿತು,

ಚಿಕ್ಕ ಮಕ್ಕಳ ಕುತೂಹಲ, ಖುಷಿ, ಅವರೊಟ್ಟಿಗಿನ ನಲಿದಾಟ ಅವರ ಜೊತೆ ದೊಡ್ಡವರಾದ ನಾವು ಕೂಡ ಚಿಕ್ಕಮಕ್ಕಳ ತರ ವರ್ತಿಸಿ ಖುಷಿಪಟ್ಟು ಸಂಭ್ರಮಿಸಿ ಒಂದು ದಿನವನ್ನು ಸಂತೋಷದಿಂದ ಕಳೆಯದವು

ಈ ಪ್ರವಾಸದ ಎಲ್ಲ ಫೋಟೋ ಮತ್ತು ವಿಡಿಯೋ ಗಳು  ಈ ಲಿಂಕ್ ನಲ್ಲಿ 

https://photos.app.goo.gl/k51vKnwSF1CAWxy36




ಪರಿಸರ, ಪ್ರಕೃತಿ, ಮರ, ಗಿಡ  ಪ್ರಾಣಿ, ಪಕ್ಷಿ , ಇವುಗಳನ್ನು ಅನುಭವಿಸಿಯೇ ಬೆಳೆಯಬೇಕು... ಇದಕ್ಕಾಗಿ ನನ್ನ ಒಂದು ಸಣ್ಣ ಪ್ರಯತ್ನ  ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ...


Sunday, April 11, 2021

ಪರಿಸರ ಜಾಗೃತಿ ಮತ್ತು ಮಕ್ಕಳು



ಪರಿಸರ, ಪ್ರಾಣಿಗಳು, ಪಕ್ಷಿಗಳು, ಮರಗಿಡಗಳು, ಹಳ್ಳಕೊಳ್ಳಗಳು, ಇದರ ಒಡನಾಟದೊಂದಿಗೆ ಮಕ್ಕಳು ಬೆಳೆಯಬೇಕೆಂದು ನನ್ನ ಅನಿಸಿಕೆ. ಹಾಗೆ ಸುಮ್ಮನೆ ಲ್ಯಾಪ್ಟಾಪ್ನಲ್ಲಿ, ಮೊಬೈಲ್ನಲ್ಲಿ, ಅಥವಾ ಒಂದು ಪ್ರೆಸೆಂಟೇಶನ್ ನಲ್ಲಿ ಇದೇ ರೀತಿ ಪಕ್ಷಿಗಳು, ಈ ರೀತಿ ಮರಗಳಿರುತ್ತವೆ ಎಂದು ಹೇಳಿದರೆ ಚಿಕ್ಕಮಕ್ಕಳಿಗೆ ಅಷ್ಟು ಚೆನ್ನಾಗಿ ಗೊತ್ತಾಗುವುದು ಇಲ್ಲ.

ಹಳ್ಳಿ ಕಡೆ ಇರುವ ಮಕ್ಕಳು ಪರಿಸರ ಜೊತೆಜೊತೆಗೆ ಬೆಳೆಯುತ್ತಾರೆ. ಅದು ಸ್ವಲ್ಪ ಕಮ್ಮಿ ಆಗಿದೆ ಅಂತ ಅನ್ನಿ. ನಗರ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಪಾರ್ಕ್ ಅಥವಾ ಚೆನ್ನಾಗಿ ಅಲಂಕಾರ ಮಾಡಿ ಸಿಂಗರಿಸಿಕೊಂಡಿರುವ ಬರೀ ಚರಂಡಿ ನೀರು ತುಂಬಿಕೊಂಡಿರುವ ಕೆರೆಗಳು ಕಾಣಸಿಗುತ್ತದೆ... ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆದಾಡಲು ಟೈಲ್ಸ್ ದಾರಿ.. ಕುಳಿತುಕೊಳ್ಳಲು ತರತರದ ಬೆಂಚುಗಳು... ಒಟ್ಟಿನಲ್ಲಿ ಕೆರೆಯಲ್ಲಿ ನೀರಿಲ್ಲದಿದ್ದರೂ ಅಥವಾ ಗಲೀಜು ನೀರಿದ್ದರೂ ನೋಡಲು ಮಾತ್ರ.. ಚಂದದ ಕೆರೆಗಳು. ನಾನು ನೋಡಿದ ಪ್ರಕಾರ ಬೆಂಗಳೂರಿನ ತುಂಬಾ ಕೆರೆಗಳ ಪರಿಸ್ಥಿತಿ ಇದೇ ರೀತಿ ಇದೆ. ಎಲ್ಲೆಲ್ಲಿ ಹಣದ ಆಸೆಗೋಸ್ಕರ ಇರುವ ಜಲಮೂಲಗಳನ್ನು ನಾಶಮಾಡಿ ನಾಮಕಾವಸ್ಥೆಗೆ ಇರುವ ಕೆರೆಗೆ ಸುಖಾಸುಮ್ಮನೆ ಖರ್ಚು ಮಾಡಿ ಇನ್ನು ಹಾಳುಮಾಡಿದ್ದಾರೆ.

ಇದೇ ರೀತಿ ಪಾರ್ಕುಗಳು ಕೂಡ ಇರೋದ್ರಲ್ಲಿ ಕೆಲವೊಂದು ಪಾರ್ಕುಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಅಷ್ಟೇ.

ಬಿಡಿ ನಾನು ಇವತ್ತು ಹೇಳಹೊರಟಿರುವುದು ಮಕ್ಕಳಲ್ಲಿ ಈಗಿನಿಂದಲೇ ಪರಿಸರದ ಬಗ್ಗೆ ಅದನ್ನು ಉಳಿಸಿಕೊಳ್ಳುವ ಬಗ್ಗೆ ವಾಸ್ತವವಾಗಿ ತೋರಿಸಿ ತಿಳಿಸಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.. ಇಲ್ಲದಿದ್ದರೆ ಕೆಲವೊಂದು ಅಪರೂಪ ಜಾತಿಯ ಮರಗಳನ್ನು ಪ್ರಾಣಿ-ಪಕ್ಷಿಗಳನ್ನು ಬರಿ ಕಂಪ್ಯೂಟರ್, ಮೊಬೈಲ್ ನಲ್ಲಿ ಫೋಟೋಗಳನ್ನು ನೋಡಬೇಕು ಅಷ್ಟೇ.

ನಾನು ಇರುವುದು ಬೆಂಗಳೂರು ಯೂನಿವರ್ಸಿಟಿ ಹಿಂಭಾಗ.. ಜ್ಞಾನಭಾರತಿ ಎಂಬ ಬಡಾವಣೆ ನಮ್ಮದು.. ಒಂದು ಖುಷಿಪಡುವ ವಿಚಾರವೆಂದರೆ ಸುಮಾರು 1200 ಎಕರೆ ಪ್ರದೇಶದಲ್ಲಿ ಸುಂದರವಾಗಿ ಇರುವ ನಮ್ಮ ಯುನಿವರ್ಸಿಟಿ ಕ್ಯಾಂಪಸ್. ಇದು ಒಂದು ಕಿರು ಅರಣ್ಯ ಪ್ರದೇಶವೆಂದು ಕರೆಯಲ್ಪಡುತ್ತದೆ.. ಅಧಿಕಾರದಾಸೆ ಹಾಗೂ ಹಣದಾಸೆ ಗೋಸ್ಕರ 1200 ಎಕರೆ ಈಗ ಅರ್ಧಕ್ಕರ್ಧ ನಾಶವಾಗಿದೆ. ವಿನಾಕಾರಣ ಅನಗತ್ಯ ಕಟ್ಟಡಗಳು, ಚೆನ್ನಾಗಿ ಬೆಳೆದಿರುವ ಮರಗಿಡಗಳನ್ನು ನೆಲಸಮ ಮಾಡಿ ತಲೆಯೆತ್ತುತ್ತಿರುವ ಕಟ್ಟಡಗಳು.. ನಮ್ಮ ಆಕ್ಸಿಜನ್ ಬ್ಯಾಂಕ್ ಆದ ಕಿರು ಅರಣ್ಯ ನಾಶಕ್ಕೆ ಮುನ್ನುಡಿ ಬರೆದಿದೆ..

ಪರಿಸರಪ್ರಿಯರ ಹಾಗೂ ಇಲ್ಲಿರುವ ಕೆಲವರು ಮುತುವರ್ಜಿಯಿಂದ ಅಳಿದುಳಿದಿರುವ ಮರಗಳನ್ನು ಹೋರಾಟ ಮಾಡಿ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಎದುರು ನಿಂತಿದೆ..

ನಮ್ಮ ರೋಡಿನಲ್ಲಿರುವ ಮಕ್ಕಳನ್ನು ಕರೆದುಕೊಂಡು ಸಾಧ್ಯವಾದಾಗಲೆಲ್ಲ ಈ ಪರಿಸರಕ್ಕೆ ಕರೆದುಕೊಂಡು ಹೋಗುತ್ತೇನೆ.. ಕಣ್ಣ ಮುಂದೆಯೇ ಹಾರಿಹೋಗುವ ನವಿಲುಗಳು, ರೆಕ್ಕೆಬಿಚ್ಚಿ ಹಾರಾಡುವ ತರತರದ ಹಕ್ಕಿಗಳು. ವಲಸೆ ಹಕ್ಕಿಗಳು, ಹಾವು.. ಮುಂಗುಸಿ... ಉದುರಿದ ಎಲೆಗಳು.. ಚಿಗುರುತ್ತಿರುವ ಹೊಸ ಹೊಸ ಎಲೆಗಳು.. ಹಸಿರು ಮರಗಳು... ಗಿಡಗಳು.. ಇವುಗಳನ್ನು ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಅವರು ನೋಡಿ ಅನುಭವಿಸಿ ಕೇಳುವಂತ ಪ್ರಶ್ನೆಗಳು ತುಂಬಾ ಖುಷಿ ಕೊಡುತ್ತದೆ.. ಒಂದು ಪಕ್ಷಿ ಇನ್ನೊಂದು ಪಕ್ಷಿಯ ಆಹಾರವನ್ನು ಕಿತ್ತುಕೊಳ್ಳಲು ಸೆಣಸಾಡುತ್ತಾ ಇದ್ದ ರೀತಿ.. ಕಾಗೆ... ಹದ್ದು... ತಮ್ಮ ಗೂಡು ಕಟ್ಟಿಕೊಳ್ಳಲು ಮರದ ಚಿಕ್ಕ ಚಿಕ್ಕ ಕಡ್ಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ನೋಟ.. ಹಕ್ಕಿಗಳು ತಮ್ಮ ಮರಿಗಳಿಗೆ ಆಹಾರವನ್ನು ತಿನ್ನಿಸುತ್ತಿದ್ದ ರೀತಿ... ಇದೆಲ್ಲವನ್ನು ನನ್ನ ಮಕ್ಕಳು ಹಾಗೂ ನಮ್ಮ ರೋಡಿನ ಮಕ್ಕಳೆಲ್ಲ ಖುಷಿಯಿಂದ ಆನಂದಿಸಿ ಪ್ರಶ್ನೆಗಳನ್ನು ಕೇಳುತ್ತಾ ಪರಿಸರದ ಪಾಠವನ್ನು ಕಲಿತರು..