Showing posts with label karnataka. Show all posts
Showing posts with label karnataka. Show all posts

Thursday, June 28, 2018

ಜೋಗಿಮಟ್ಟಿ - ಕರ್ನಾಟಕದ ಊಟಿ

ಜೋಗಿಮಟ್ಟಿ - ಕರ್ನಾಟಕದ ಊಟಿ
ಚಿತ್ರದುರ್ಗ ಎಂದಾಕ್ಷಣ ನಮಗೆ ನೆನಪಾಗುವುದು ಏಳು ಸುತ್ತಿನ ಕಲ್ಲಿನ ಕೋಟೆ, ಸುತ್ತಲೂ ಕಲ್ಲುಗಳಿಂದ ಕೂಡಿರುವ ಪ್ರದೇಶ , ಬಯಲು ಸೀಮೆಯ ಬೆಂಗಾಡು ಎಂದು .. ಆದರೆ ಇಲ್ಲೂ ಕೂಡ ಒಂದು ರಮಣೀಯವಾದ ಗಿರಿಧಾಮವಿದೆ, ಇದರ ಹೆಸರು ಜೋಗಿಮಟ್ಟಿ ಎಂದು, ಹಚ್ಚಹಸಿರಿನ ಸುಂದರ ಸ್ವಚ್ಛಂದ ಪರಿಸರ, ಅದ್ಭುತವಾದ ಜಾಗ, ಇದೊಂದು ರಕ್ಷಿತಾರಣ್ಯ ಪ್ರದೇಶ ಆದ ಕಾರಣ ಜನರಿಗೆ ಇದರ ಒಳಗೆ ಹೋಗಲು ಅರಣ್ಯಾಧಿಕಾರಿಗಳ ಅನುಮತಿ ಪತ್ರ ಬೇಕು.. ಇದು ಕರ್ನಾಟಕದ ಊಟಿ ಅಂತ ಕೂಡ ಕರೀತಾರಂತೆ...

ಈ ಸುಂದರ ಗಿರಿಧಾಮ ಚಿತ್ರದುರ್ಗದಿಂದ ಕೆಲವು ಕಿಲೋಮೀಟರ್ ಗಳ ದೂರದಲ್ಲಿದೆ ಇಲ್ಲಿಗೆ ಹೋಗಲು... ಚಿಕ್ಕದಾದ ರಸ್ತೆ ಕೂಡ ಇದೆ. ಸಮುದ್ರಮಟ್ಟದಿಂದ 3643 ಅಡಿ ಇರುವ ಈ ಪ್ರದೇಶವು ಸುಂದರ ಗಿರಿಧಾಮಗಳಲ್ಲಿ ಒಂದು, ಇದರ ರಮಣೀಯತೆ ಮುಂಗಾರಿನ ಮಳೆಯ ಕಾಲದಲ್ಲಿ ಅತಿ ಅದ್ಭುತವಾಗಿರುತ್ತದೆ, ಜೋರಾಗಿ ಬೀಸುವ ಗಾಳಿ, ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ, ಮೋಡಗಳ ನಡುವೆಯೇ ಸಾಗುತ್ತಿರುವಂತೆ ಅನುಭವ, ಸುಮಾರು 150 ಕ್ಕೂ ಹೆಚ್ಚು ಪಕ್ಷಿಗಳಿಂದ ಪ್ರಬೇದದಿಂದ ಕೂಡಿರುವ ಚಿಲಿಪಿಲಿ ಕಲರವ.. ಈ ಜಾಗಕ್ಕೆ ಸಾಗುತ್ತಿದ್ದ ಹಾಗೆ ಹೆಚ್ಚಿನ ಸಂಖ್ಯೆಯಲ್ಲಿರುವ ನವಿಲುಗಳು ನಮ್ಮನ್ನು ಸ್ವಾಗತಿಸುತ್ತವೆ. ಮಳೆಗಾಲದಲ್ಲಿ ಹಾಗೂ ಮುಂಗಾರಿನಲ್ಲಿ ಇದೊಂದು ಅದ್ಭುತವಾದ ಪ್ರದೇಶ.

ತುಂತುರು ಮಳೆ ಗಳ ಜೊತೆಯಲ್ಲಿ, ಮೋಡಗಳ ಜೊತೆಯಲ್ಲಿ ,,,,ಬೆಳ್ಳಂಬೆಳಿಗ್ಗೆ ಕೆಲ ಹೊತ್ತು ಇಲ್ಲಿ ಕಳೆಯುವ ಅವಕಾಶ ಸಿಕ್ಕಿತ್ತು.... ವಾಹ್ ಎಂತಹ ಅನುಭವ ಅದು, ಕೆಲವೊಂದು ಸಾರಿ ಮೋಡಗಳು ಹಾಗೂ ಮಂಜು ಎಷ್ಟು ದಟ್ಟವಾಗಿತ್ತು ಎಂದರೆ ಹತ್ತು ಇಪ್ಪತ್ತು ಮೀಟರ್ ಮುಂದೆ ಇರುವ ಮನುಷ್ಯರು ಕೂಡ ಕಾಣಿಸುತ್ತಾ ಇರಲಿಲ್ಲ..

ಮಳೆಗಾಲದಲ್ಲಿ ಚಿತ್ರದುರ್ಗಕ್ಕೆ ಹೋದರೆ ಖಂಡಿತ ಇಲ್ಲಿಗೆ ಹೋಗಿ ಬನ್ನಿ ಆದರೆ ಪರಿಸರಕ್ಕೆ ಮಾತ್ರ ಹಾನಿ ಮಾಡಬೇಡಿ










ರಸ್ತೆಗಳು --- ಬದುಕಿನ ಪಯಣವೂ

ರಸ್ತೆಗಳು --- ಬದುಕಿನ ಪಯಣವೂ 

ನನಗೊಂದು ಹುಚ್ಚು ಆಸೆ... ದಾರಿಯಲ್ಲಿ ಹೋಗುತ್ತಿರುವಾಗ ಅಥವಾ ಎಲ್ಲಾದರೂ ಪ್ರವಾಸಕ್ಕೆ ಹೋಗಿದ್ದಾಗ ದಾರಿ ಉದ್ದಕ್ಕೂ ಕಾಣಸಿಗುವ ರಸ್ತೆಗಳನ್ನು ಫೋಟೋ ತೆಗೆಯುವ ಆಸೆ, ಅದೆಷ್ಟು ಫೋಟೋಗಳನ್ನು ತೆಗೆದಿದ್ದೇನೋ ಹೀಗೆ...

ನಮ್ಮ ಬದುಕಿನ ಪಯಣ ಕೂಡ ರಸ್ತೆಯ ರೀತಿಯಲ್ಲಿ ಸಾಗುವುದು, ಒಂದೊಂದು ರೀತಿ, ಒಂದೊಂದು ತರ, ಒಂದೊಂದು ಕಾಲದಲ್ಲಿ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಬದುಕಿನ ಪಯಣದಲ್ಲಿ ನಾವು ಒಗ್ಗಿ ಕೊಳ್ಳಬೇಕು.. ರಸ್ತೆಗಳು ಚೆನ್ನಾಗಿದೆ ಅಂತ ತುಂಬಾ ಜೋರಾಗಿ ಹೊರಟರೆ ಅಪಾಯ ಕಾದಿಟ್ಟ ಬುತ್ತಿ ... ನಮ್ಮ ಬದುಕಿನ ಪಯಣದಲ್ಲಿ ಈ ರಸ್ತೆಗಳಲ್ಲಿ ಕಾಣಸಿಗುವ ಸೌಂದರ್ಯವನ್ನು ಆಸ್ವಾದಿಸುತ್ತಾ ದಾರಿ ಮಧ್ಯದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸುತ್ತಾ ನಮ್ಮ ಗುರಿಯ ಕಡೆಗೆ ಸಾಗಬೇಕು... ರಸ್ತೆಗಳು ಹಾಗೂ ಬದುಕಿನ ಪಯಣದ ದಾರಿ ಒಂದೇ ... ಗುರಿ ಇದ್ದರೆ ಅದಕ್ಕೆ ತಕ್ಕುದಾದ ಪ್ರಯತ್ನವಿದ್ದರೆ ಗುರಿಯನ್ನು ಸುಲಭವಾಗಿ ತಲುಪಬಹುದು

ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುತ್ತದೆ ನಮ್ಮ ರಸ್ತೆಗಳು. ಮಳೆಗಾಲದಲ್ಲಿ ಹಸಿರು ಸಿರಿ ಗಳ ಮಧ್ಯೆ ಸೀಳಿಕೊಂಡು ಹೋಗಿರುವ ಕಪ್ಪು ಬಣ್ಣದ ಗೆರೆಯಂತೆ, ಬೇಸಿಗೆ ಕಾಲದಲ್ಲಿ ಅಕ್ಕಪಕ್ಕ ಒಣಗಿ ಹೋಗಿರುವ ಹುಲ್ಲುಗಳ ನಡುವೆ, ಮರ ಗಿಡಗಳ ನಡುವೆ ಕಪ್ಪಗೆ ಮಲಗಿಕೊಂಡು, ಬಿಸಿಲ ಹೊಡೆತಕ್ಕೆ ಮಿರಿಮಿರಿ ಮಿನುಗುತ್ತಾ ಇರುವ ರಸ್ತೆಗಳು. ಹಾಗೆ ಚಳಿಗಾಲದಲ್ಲಿ ಮುಂಜಾವಿನ ಸಮಯದಲ್ಲಿ ದಟ್ಟ ಮಂಜಿನ ಒಳಗಡೆ ಹುದುಗಿ ಹೋಗಿರುವ ಮಬ್ಬು ಮಬ್ಬಾಗಿರುವ ರಸ್ತೆಗಳು... ಒಟ್ಟಿನಲ್ಲಿ ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುವ, ಹಾಗೆ ಬದುಕಿನ ಪಯಣದ ಹಾದಿ ನೆನಪಿಸುವ ಚಿಕ್ಕ, ದೊಡ್ಡ ರಸ್ತೆಗಳು ಅದ್ಭುತವಾದ ಆನಂದವನ್ನು ಕೊಡುತ್ತದೆ... ಈ ನಡುವೆ ನಮ್ಮ ಕರ್ನಾಟಕದ ರಸ್ತೆಗಳು ಕೂಡ ಅತಿ ಸುಂದರವಾಗಿ ನಾಜೂಕಾಗಿ ನಿರ್ಮಾಣಗೊಂಡಿದೆ, ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ಇಂತಹಾ ರಸ್ತೆಗಳ ಮೇಲೆ ಹೋಗುವುದೇ ಒಂದು ಆನಂದ... ಅದೇ ರೀತಿ ಪರಿಸರಕ್ಕೆ ಹಾನಿಯಾಗದೆ ರೀತಿ ನೋಡಿಕೊಳ್ಳಬೇಕಾದದ್ದು ಕೂಡ ನಮ್ಮ ಕರ್ತವ್ಯ.



ಕರ್ನಾಟಕದ ಕೆಲವೊಂದು ರಸ್ತೆಗಳ ಫೋಟೋಗಳು......