Monday, March 21, 2022

ಶುಭಂ ಕರೋತಿ ಗುರುಕುಲ --ಗುರುಕುಲದ ಪ್ರತಿಧ್ವನಿಗಳು

 

ಶುಭಂ ಕರೋತಿ ಗುರುಕುಲ --ಗುರುಕುಲದ ಪ್ರತಿಧ್ವನಿಗಳು


ಜೀವನದಲ್ಲಿ ಶಿಕ್ಷಣ ಅತಿಮುಖ್ಯವಾದುದು. ನಮ್ಮ ಭಾರತೀಯ ಸಂಸ್ಕೃತಿಯ ಪುರಾತನ ಕಾಲದಿಂದಲೂ ಕೂಡ ವೇದ ಅಧ್ಯಯನ , ವೇದಾಭ್ಯಾಸ, ಶಿಕ್ಷಣ ಇವುಗಳಿಗೆ ಬಹಳ ಮಹತ್ವ ಕೊಡುತ್ತಿದ್ದರು. ಆಗಿನ ಕಾಲದಲ್ಲಿ ನಳಂದಾ ವಿಶ್ವವಿದ್ಯಾಲಯ ಅಂತಹ ಶಿಕ್ಷಣ ಸಂಸ್ಥೆಗಳು ಇದ್ದವೆಂದು ನಾವೆಲ್ಲ ಓದಿದ್ದೇವೆ.

ಇದಕ್ಕಿಂತಲೂ ಮುಖ್ಯವಾಗಿ ಗುರುಕುಲ ಪದ್ಧತಿ ಪ್ರಕಾರ ಶಿಕ್ಷಣ ನೀಡುವ ವ್ಯವಸ್ಥೆ ನಮ್ಮಲ್ಲಿ ಮೊದಲಿನಿಂದಲೂ ಇದೆ,

ಚಿಕ್ಕಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಶಿಕ್ಷಣ ಕೊಡಬೇಕು ಎಂದು ತುಂಬಾ ಹೋರಾಟಗಳು ಆಗಿವೆ.

ವಿಪರ್ಯಾಸ ಎಂದರೆ ಈಗಿನ ನಮ್ಮ ಶಿಕ್ಷಣ ಪದ್ಧತಿಯು ಒಳ್ಳೆಯ ಶಿಕ್ಷಣವನ್ನು ಕೊಟ್ಟು ಮಕ್ಕಳನ್ನು ರೂಪಿಸುವ ಬದಲಾಗಿ, ಒಂದು ವ್ಯವಹಾರಿಕ ದಂಧೆಯಾಗಿ ಮಾರ್ಪಟ್ಟಿದೆ.

ನೂರಾರು ಕಾರಣಗಳು.. ರಾಜಕೀಯ ಮೇಲಾಟ, ರಾಜಕಾರಣಿಗಳ ಹಸ್ತಕ್ಷೇಪ, ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತುಂಬಾ ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿಯ ಜನರ ಪ್ರಾಣವನ್ನು ಹಿಂಡುತ್ತಿದೆ.

ಕೆಲವೊಂದು ಕಡೆ ದುಡ್ಡು ಕೊಟ್ಟರು ಬೇಕಾಗಿರುವ ಶಿಕ್ಷಣ, ಸಂಸ್ಕೃತಿ, ವಿಧೇಯ, ಶ್ರದ್ಧೆ, ಇದು ಯಾವುದು ಸಿಗುತ್ತಿಲ್ಲ ಎಂಬುದು ನಮಗೆ ನಿಮಗೆ ತಿಳಿದಿರುವ ವಿಷಯವೇ. ಆದರೂ ಕೆಲವೊಂದು ವಿದ್ಯಾಸಂಸ್ಥೆಗಳು ಡೊನೇಶನ್ ದುಡ್ಡು ತೆಗೆದುಕೊಂಡರು ಅವರ ಆತ್ಮಸಾಕ್ಷಿಯಿಂದ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಶಿಕ್ಷಣ ನೀಡುವ ವ್ಯವಸ್ಥೆಯಾಗಿದೆ.

ಇಂಥ ಸಮಾಜದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ಎಲೆಮರೆಯ ಕಾಯಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.

ನನ್ನ ಅದೃಷ್ಟವು ಏನೋ ಇಂತಹ ಒಂದು ಸಂಸ್ಥೆಯಲ್ಲಿ ನನ್ನ ಒಡನಾಟ ಉಂಟಾಗಿದ್ದು ತುಂಬಾ ಖುಷಿ ಮತ್ತು ಆನಂದವನ್ನು ಕೊಟ್ಟಿತು.

ಹೌದು ನಾನು ಹೇಳಲು ಹೊರಟಿರುವುದು ಬೆಂಗಳೂರು ಸಮೀಪ ದೊಡ್ಡ ಆಲದ ಮರದ ರಸ್ತೆ ರಾಮೋಹಳ್ಳಿ ಹತ್ತಿರ ಇರುವ, ಬರೀ ಹೆಣ್ಣುಮಕ್ಕಳಿಗಾಗಿಯೇ ಸ್ಥಾಪಿಸಿರುವ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಭಾಗವನ್ನು, ಗುರುಕುಲ ಶಿಕ್ಷಣ ಮಾದರಿಯಲ್ಲಿ ಹೇಳಿಕೊಳ್ಳುತ್ತಿರುವ, ಅದರಲ್ಲೂ ಉಚಿತವಾಗಿ ಊಟ ವಸತಿಗಳನ್ನು ಕೊಟ್ಟು ಸದೃಢ, ಸುಸಂಸ್ಕೃತ ಹಾಗೂ ಭವಿಷ್ಯದ ಭಾರತೀಯ ಹೆಣ್ಣುಮಕ್ಕಳನ್ನು ಬೆಳೆಸುತ್ತಾ ಬೆಳೆದು ಬಂದಿರುವ "ಶುಭಂ ಕರೋತಿ ಗುರುಕುಲ" ಇದರ ಬಗ್ಗೆ.

ಶ್ರೀಯುತ ಪ್ರಮೋದ್ ಕಾಮತ್ ಅವರು ಇಪ್ಪತ್ತೈದು ವರ್ಷಗಳ ಕೆಳಗೆ ಬೀಜವನ್ನು ಹಾಕಿ, ಸಸಿಯನ್ನು ಬೆಳೆಸಿ ಇಂದು ಹೆಮ್ಮರವಾಗುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ನೂರಾರು ಬಡ ಹೆಣ್ಣುಮಕ್ಕಳು ಈ ಗುರುಕುಲದ ಸದುಪಯೋಗವನ್ನು ಪಡೆದು ಇಂದು ಅತ್ಯುನ್ನುತ ಹುದ್ದೆಗಳಲ್ಲಿ ಇದ್ದಾರೆ.

ಅಚಾನಕ್ಕಾಗಿ ಪರಿಚಯವಾದ ನಮ್ಮ ದುರ್ಗಾ ಪರಮೇಶ್ವರ್ ಭಟ್, ಶುಭಂ ಕರೋತಿ ಗುರುಕುಲದ ಮೇಲ್ವಿಚಾರಕರು, ನನ್ನ ಬಳಿ ಬಂದು ನಮ್ಮ ಗುರುಕುಲ ಕ್ಕಾಗಿ ಡಾಕ್ಯುಮೆಂಟರಿ ವಿಡಿಯೋ ಅಗತ್ಯವಿರುವ ಬಗ್ಗೆ ಪ್ರಸ್ತಾಪಿಸಿದರು. ನಾನು ಸರಿ ಎಂದು ಗುರುಕುಲಕ್ಕೆ ಬೇಟಿ ಕೊಟ್ಟೆ.

ಮೊದಲನೇ ಭೇಟಿ ಯಿಂದಲೇ ಗುರುಕುಲದ ಮಹತ್ವವು ಅರಿವಾಗತೊಡಗಿತು. ಸಂಪೂರ್ಣ ಸಂಸ್ಕೃತಮಯ ವಾತಾವರಣದಲ್ಲೇ ಬೆಳೆಯುತ್ತಿರುವ ಕರ್ನಾಟಕದ ಬೇರೆ ಮೂಲೆಮೂಲೆಗಳಿಂದ ಬಂದ ಹೆಣ್ಣು ಮಕ್ಕಳು 5ನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿದ್ದ ರೀತಿ, ಇದರ ಜೊತೆ ಜೊತೆಯಲ್ಲಿಯೇ ವೇದ ಅಧ್ಯಯನ, ಉಪನಿಷತ್, ಮಂಕುತಿಮ್ಮನ ಕಗ್ಗ, ವಚನಗಳು, ಸಂಗೀತ, ಕಲೆ, ಭರತನಾಟ್ಯ, ತಬಲ, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್, ಕೊಳಲು, ಕರಾಟೆ.... ಅಬ್ಬಾ ತಮಗೆ ಸಿಕ್ಕಿರುವ ಅಲ್ಪ ಸಮಯದಲ್ಲಿ ಇವೆಲ್ಲವನ್ನೂ ಕಲಿಯುತ್ತಾ ಲವಲವಿಕೆಯಿಂದ ಈ ಪರಿಸರದಲ್ಲಿ ಓಡಾಡುತ್ತಾ ಇದ್ದಾಗ , ನನಗೆ ನಿಜವಾಗಲೂ ಅನಿಸಿದ್ದು ಇಂತಹ ನೂರಾರು ಗುರುಕುಲಗಳ ಅವಶ್ಯಕತೆ ನಮ್ಮ ಈಗಿನ ಪೀಳಿಗೆಯ ಮಕ್ಕಳಿಗೆ ಇದೆಯೆಂದು.

ಇಲ್ಲಿನ ಒಂದು ದಿನದ ಪೂರ್ಣ ದಿನಚರಿಯ ಸಂಕ್ಷಿಪ್ತ ವರದಿಯನ್ನು ವಿಡಿಯೋ ಮೂಲಕ ಒಂದು ಡಾಕ್ಯುಮೆಂಟರಿ ತರ ಮಾಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿದ್ದು ನನ್ನ ಅದೃಷ್ಟವೇ ಸರಿ.

ಮೊದಲಿಗೆ ಚಿಕ್ಕದಾಗಿ ವಿಡಿಯೋ ಮಾಡೋಣ ಎಂದುಕೊಂಡಿದ್ದೆ. ಆದರೆ ಇಲ್ಲಿನ ಪರಿಸರ, ಇಲ್ಲಿರುವ ಮಕ್ಕಳ ಶ್ರದ್ಧೆ, ಭಕ್ತಿ, ಪ್ರತಿಯೊಂದು ಆಕ್ಟಿವಿಟಿ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ರೀತಿ, ನನ್ನನ್ನು ಮಂತ್ರಮುಗ್ಧನಾಗಿ ಮಾಡಿಸಿತು.

ಇದೇ ಕಾರಣಕ್ಕಾಗಿ ಹೆಚ್ಚು ಸಮಯವನ್ನು ಕೊಟ್ಟು ಗುರುಕುಲದ ಪ್ರತಿಯೊಂದು ವಿಷಯಗಳನ್ನು ಕುಲಂಕುಶವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಒಂದು ಡಾಕ್ಯುಮೆಂಟರಿಯನ್ನು ನಿರ್ಮಿಸಿ ಕೊಟ್ಟಿದ್ದೇನೆ.

ಸುಮಾರು 10 ಎಕರೆ ಜಾಗದಲ್ಲಿ, ಸುಂದರ ಬೃಹದಾಕಾರವಾಗಿ ಬೆಳೆದು ನಿಂತ ಅರಳಿಮರ ,ಅಶ್ವತ್ಥಮರ, ನೇರಳೆ ಮರ. ಇವುಗಳ ಕೆಳಗೆ ಪಾಠ ಮಾಡುವ ರೀತಿ.. ಪಕ್ಷಿಗಳು, ಚಿಟ್ಟೆಗಳು, ಅಳಿಲು, ಮುಂಗುಸಿ, ಇವುಗಳ ಜೊತೆ ಜೊತೆಯಲ್ಲಿಯೇ ಪಾಠಗಳನ್ನು ಕಲಿಯಲು ಇರುವ ಸಣ್ಣ ಕೊಠಡಿಗಳು. ಇಲ್ಲಿನ ಮಕ್ಕಳೇ ಮುತುವರ್ಜಿವಹಿಸಿ ಬೆಳೆಸುವ ತರಕಾರಿಗಳು, ಹೂಗಳು, ಇಲ್ಲಿ ಇರುವ ಗೋಶಾಲೆ, ಹಸುಗಳ ಜೊತೆಗಿನ ಒಡನಾಟ!!! ಅಬ್ಬಾ ಇವುಗಳನ್ನು ನೋಡುತ್ತಿದ್ದರೆ ಇಲ್ಲಿನ ಮಕ್ಕಳು ಎಷ್ಟು ಅದೃಷ್ಟವಂತರು ಎಂದು ಅನ್ನಿಸದೇ ಇರಲಾರದು.

ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭವಾಗುವ ದಿನಚರಿ ಪ್ರತಿದಿನ ಪೂಜಾ ವಿಧಾನ, ವೇದಾಧ್ಯಯನ, ಪಾಠ ಆಟ .. ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಒಳಗೊಂಡಿರುತ್ತದೆ.

ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆ ಪದ್ಧತಿ ಆಚಾರ ವಿಚಾರಗಳು ಅನಾವರಣಗೊಳ್ಳುತ್ತದೆ. ಇದಿಷ್ಟು ಮಾತ್ರವಲ್ಲದೆ ಇಲ್ಲಿನ ಮಕ್ಕಳು ಬೇರೆ ಬೇರೆ ಕಡೆ ಹೋಗಿ ತಮ್ಮ ಕಲಿಕಾ ಶಕ್ತಿಯನ್ನು ಪ್ರದರ್ಶಿಸಿ ಪ್ರಶಸ್ತಿಗಳನ್ನು ತೆಗೆದುಕೊಂಡು ಬಂದಿರುತ್ತಾರೆ.

ಎಲ್ಲಾ ಮಕ್ಕಳ ಬಾಯಲ್ಲಿ ಸುಮಾರು ಸಾವಿರ ಶ್ಲೋಕಗಳು, ವಚನಗಳು, ಮಂಕುತಿಮ್ಮನ ಕಗ್ಗ, ವೇದ. ಭಗವದ್ಗೀತೆ ಉಪನಿಷತ್, ಎಷ್ಟು ಚೆನ್ನಾಗಿ ಬೆರೆತಿವೆ ಎಂದರೆ.ಇಷ್ಟು ಶ್ಲೋಕಗಳಲ್ಲಿ ಇವರು ಅಂತ್ಯಾಕ್ಷರಿ ಹಾಡುತ್ತಿರುತ್ತಾರೆ.

ಇದರ ಬಗ್ಗೆ ಸಂಕ್ಷಿಪ್ತವಾದ ಒಂದು ಇಪ್ಪತ್ತು ನಿಮಿಷದ ವಿಡಿಯೋವನ್ನು ಮಾಡಿದ್ದೇನೆ. ಈ ವಿಡಿಯೋ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಇದೆ. ಈ ವಿಡಿಯೋ ಇಷ್ಟು ಚೆನ್ನಾಗಿ ಮೂಡಿಬರಲು ಸಹಕರಿಸಿದ "ಶುಭಂ ಕರೋತಿ ಗುರುಕುಲದ " ಸಂಸ್ಥಾಪಕರಾದ ಶ್ರೀಯುತ ಪ್ರಮೋದ್ ಕಾಮತ್ ಅವರು, ದುರ್ಗಾ ಪರಮೇಶ್ವರ್ ಬಟ್ ಅವರು. ಮೃತ್ಯುಂಜಯ ಶಾಸ್ತ್ರಿ , ಹಾಗೂ ಗುರುಕುಲದ ಮಕ್ಕಳು ಇವರೆಲ್ಲರಿಗೂ ನನ್ನ ಅನಂತ ವಂದನೆಗಳು

ಹಾಗೂ ವಿಡಿಯೋ ಎಡಿಟಿಂಗ್ ನಲ್ಲಿ ಸಹಕರಿಸಿದ ಶ್ರೀಯುತ ಹನುಮಂತ ರಾಜು ಅವರಿಗೂ ನನ್ನ ಅನಂತ ವಂದನೆಗಳು

ನಿಮಗಾಗಿ ಗುರುಕುಲದ ಬಗ್ಗೆ ಮಾಡಿರುವ ವಿಡಿಯೋ ಲಿಂಕ್ ಈ ಕೆಳಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

ಕನ್ನಡ ವರ್ಷನ್ :- https://youtu.be/pPjkQr_fCyE

English version - https://youtu.be/uW_x379_C_4


ಶುಭಂ ಕರೋತಿ ಗುರುಕುಲ ಕ್ಕೆ ಯಾವುದೇ ರೀತಿಯ ಸಹಾಯಕ್ಕೆ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಬಹುದು

Shubham Karoti (Maitreyee Gurukula),

No 52 / 1 , Big Banian Tree Road, Ramohalli, Kengeri Hobli , Bengaluru 560 074, Karnataka, India

Email : info@shubhamkarotigurukula.com

Tel: +91 (80) 28437423, +91 (80) 28437424

Phone: +91 99000 51846

No comments:

Post a Comment