ಮಕ್ಕಳ ಜೊತೆಗೆ ಎರಡು ದಿನದ ಪ್ರವಾಸ ಚಾರಣ ಹಾಗೂ ಪ್ರಕೃತಿ ಜೊತೆಗಿನ ಒಡನಾಟ......
ಏಪ್ರಿಲ್ 15ನೇ ತಾರೀಕು 2022, ನಮ್ಮ ಮಕ್ಕಳ ತಂಡ ಚಿಂತಾಮಣಿ ಹತ್ತಿರ ಇರುವ ಮುರುಗಮಲ್ಲ ಎನ್ನುವ ಪ್ರದೇಶಕ್ಕೆ ಹೊರಟಿತ್ತು.
ಹತ್ತು ಮಕ್ಕಳ ಜೊತೆಗೆ ನಾನು ಮತ್ತೆ ನನ್ನ ಮಡದಿ ಶ್ವೇತಾ ಗುಂಪುಗೂಡಿ ಮಕ್ಕಳನ್ನು ಕರೆದುಕೊಂಡು ಮುರುಗಮಲ್ಲಾ ಕ್ಷೇತ್ರಕ್ಕೆ ಹೊರಟೆವು.
ಬೆಂಗಳೂರಿನಿಂದ ಸುಮಾರು 2 ಗಂಟೆಗಳ ಪ್ರಯಾಣ... ಮೊದಲೇ ಟಿಟಿ ಬುಕ್ ಮಾಡಿದ್ದೆವು.. ಬೆಳಗಿನ ಜಾವ ಸುಮಾರು ಐದು ಮೂವತ್ತಕ್ಕೆ ನಮ್ಮ ಪ್ರಯಾಣ ಶುರುವಾಯಿತು. ಚಿಕ್ಕ ಮಕ್ಕಳ ಉತ್ಸಾಹ ಮುಗಿಲುಮುಟ್ಟಿತ್ತು...
ಮೊದಲೇ ಹೇಳಿ ನಿಗದಿಪಡಿಸಿದ ಹಾಗೆ .. ಚಿಕ್ಕಮಕ್ಕಳ ತಂದೆ-ತಾಯಂದಿರು ತನ್ನ ಮಕ್ಕಳನ್ನು ನಿಗದಿ ಮಾಡಿದ ಜಾಗಕ್ಕೆ ತಂದು ಬಿಟ್ಟಿದ್ದರು... ಎಲ್ಲರನ್ನೂ ಕೂಡಿಸಿಕೊಂಡು ಹೊರಡುವುದು ಹೊತ್ತಿಗೆ ಸುಮಾರು ಆರು ಗಂಟೆ ಆಗಿತ್ತು.
ಬೆಂಗಳೂರಿನಿಂದ ನೂರಿಪ್ಪತ್ತು ಕಿಲೋಮೀಟರ್ ದೂರವಿರುವ ಚಿಂತಾಮಣಿ ತಾಲೂಕಿನ ಹತ್ತಿರವಿರುವ ಮುರುಗಮಲೆ ಎನ್ನುವ ಒಂದು ಚಿಕ್ಕ ಊರು.
ಇಲ್ಲಿ ಮೊದಲೇ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರೂಮುಗಳನ್ನು ಹಾಗೂ ಊಟ-ತಿಂಡಿಯ ವ್ಯವಸ್ಥೆ ಗಳನ್ನು ಮಾಡಲಾಗಿತ್ತು.
ಸುಮಾರು ಎಂಟು ಗಂಟೆಯ ಹೊತ್ತಿಗೆ ಇಲ್ಲಿಗೆ ಬಂದು ಸೇರಿ ರೂಮಿನಲ್ಲಿ ತಮ್ಮ ಬಟ್ಟೆ ಸಾಮಾನುಗಳನ್ನು ಇಟ್ಟು. ಬಿಸಿಬಿಸಿಯಾಗಿ ರೆಡಿಯಾಗಿದ್ದ ರೈಸ್ ಬಾತ್ ತಿಂಡಿಯನ್ನು ತಿಂದುಕೊಂಡು. ನಮ್ಮ ಪಯಣ ಶುರುವಾಯಿತು.
ಮೊದಲಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆವರಣ ಹಾಗೂ ಇದರ ಹತ್ತಿರ ಇರುವ ಮುಕ್ತೇಶ್ವರ ಎಂಬ ಇನ್ನೊಂದು ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ನಡೆದುಕೊಂಡು ಹೊರಟೆವು. ಸುಮಾರು ಇಪ್ಪತ್ತು ನಿಮಿಷದ ನಡಿಗೆ. ದಾರಿಯುದ್ದಕ್ಕೂ ಸಿಗುವ ಪಕ್ಷಿಗಳ ಬಗ್ಗೆ ವಿವರಿಸುತ್ತಾ, ಮರಗಿಡಗಳ ಬಗ್ಗೆ ತಿಳಿಸುತ್ತಾ, ಚಿಟ್ಟೆಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುತ್ತಾ ಸಂತೋಷವಾಗಿ ಚಿಕ್ಕ ಬೆಟ್ಟವನ್ನು ಎಲ್ಲಾ ಮಕ್ಕಳು ಹತ್ತಿದರು.
ಕೈರಾತ , ಚಂದ್ರಮುಕುಟ, ಮರಕುಟಿಕ, ಮೈನಾ, ಮುತ್ತು ತರತರಹದ ಚಿಟ್ಟೆಗಳು ನಮ್ಮನ್ನು ಸ್ವಾಗತಿಸಿದರು..
ಮುಕ್ತೇಶ್ವರ ದೇವಸ್ಥಾನ ಆವರಣದ ಒಳಗೆ ಒಂದು ದೊಡ್ಡ ಅರಳಿಮರ, ತಂಪಾದ ಗಾಳಿ ಪ್ರಶಾಂತ ವಾತಾವರಣ, ಹೆಚ್ಚಿನ ಬಿಸಿಲಿದ್ದರೂ ಆಯಾಸ ಆಗದೆ ಇರುವ ಹಾಗೆ ಮಾಡಿತ್ತು.
ಇಲ್ಲಿಂದ ಮುಂದೆ ಕಾಲ್ನಡಿಗೆಯಲ್ಲಿ ಇನ್ನೊಂದು ಬೆಟ್ಟ ಹಾಗೂ ಕುರುಚಲು ಕಾಡುಗಳು ಇರುವ ಪ್ರದೇಶಕ್ಕೆ ನಮ್ಮ ಪ್ರಯಾಣ ಮುಂದುವರಿತು. ದಾರಿಯುದ್ದಕ್ಕೂ ಚಿಕ್ಕಮಕ್ಕಳ ಉತ್ಸಾಹ ಪಕ್ಷಿನೋಟ, ತರತರಹದ ತರಲೆ ಆಟಗಳು..
ಕೈಗೆ ಸಿಕ್ಕ ಹೂವು.. ಗಿಡಗಳ ಎಲೆಗಳು... ತರತರಹದ ಕಾಯಿಗಳು ಇವುಗಳನ್ನು ಸಂಗ್ರಹಿಸುತ್ತ ಕಡಿದಾದ ಬೆಟ್ಟವನ್ನು ಇಳಿಯುತ್ತ ಮುಂದೆ ಸಾಗಿತು ನಮ್ಮ ಚಿನ್ನರ ಗುಂಪು.
ಮುಂದೆ ಸಾಗುತ್ತ ಬಸವಣ್ಣ ಬಾಯಿಂದ ನೀರು ಬರುವ ಜಾಗಕ್ಕೆ ಬಂದೆವು. ಇಲ್ಲಿನ ವಿಶೇಷತೆ ಎಂದರೆ ವರ್ಷಪೂರ್ತಿ ದಿನದ 24 ಗಂಟೆಗಳು ಕೂಡ ಈ ಬಸವಣ್ಣನ ಬಾಯಿಂದ ಯಾವಾಗಲೂ ಶುದ್ಧವಾದ ನೀರು ಬರುತ್ತಿರುತ್ತದೆ.. ಎರಡು ದಿನ ಇಲ್ಲಿ ನೀರನ್ನೇ ನಾವು ಕುಡಿಯುತ್ತಲೇ ಇದ್ದಿದ್ದು... ದೊಡ್ಡದಾದ ಮರಗಳು ಅರಳಿ ಮರ, ಬೇವಿನ ಮರ, ಹೊಂಗೆ ಮರ, ತಂಪಾದ ಜಾಗದಲ್ಲಿ ಅಲ್ಲೇ ಇದ್ದ ಒಂದು ಚಿಕ್ಕ ವಾನರ ಅಂದರೆ ಕೋತಿಗಳ ಸಂಸಾರದ ಜೊತೆ ಚಿಕ್ಕ ಕೋತಿ ಮರಿಯ ಆಟಗಳನ್ನು ನೋಡುತ್ತಾ. ನಮ್ಮ ಕಪಿ ಸೈನ್ಯ ಅದರ ಜೊತೆಗೆ ತಮಾಷೆ ಮಾಡುತ್ತಾ ನಿಂತಿತ್ತು....
ಅಲ್ಲಿಂದ ಮುಂದೆ ದೇವಸ್ಥಾನದ ಆವರಣದಲ್ಲಿ ಸುತ್ತಾಡಿಕೊಂಡು ವಾಪಸ್ ನಾವು ಇಳಿದಿದ್ದ ರೂಮಿನ ಕಡೆ ಬಂದೆವು.
ಈ ಚಿಕ್ಕ ಚಾರಣದಲ್ಲಿ ಅಪರೂಪವಾಗಿ ಕಾಣ ಸಿಕ್ಕ ಹಳದಿ ಗಲ್ಲದ ಪಿಕಳಾರ ... ಎಲ್ಲಾ ಮಕ್ಕಳಿಗೂ ಖುಷಿಕೊಟ್ಟಿತು.
Nice write up
ReplyDeleteInformative
Very nice write up
ReplyDelete