Friday, December 30, 2022

ಸ್ಕಂದಗಿರಿ ಬೆಟ್ಟದ ತಪ್ಪಲಲ್ಲಿ ಸೂರ್ಯಾಸ್ತದ ದೃಶ್ಯ ಕಾವ್ಯ..

 

ಸೂರ್ಯಾಸ್ತದ ದೃಶ್ಯ ಕಾವ್ಯ..
ಮೊನ್ನೆ ಸ್ಕಂದಗಿರಿ ಬೆಟ್ಟದ ಹತ್ತಿರ ಹೋಗಿದ್ದೆ... ಒಂದು ಮಗ್ಗುಲಲ್ಲಿ ನಂದಿ ಬೆಟ್ಟ,, ಇನ್ನೊಂದು ಕಡೆ ಸ್ಕಂದಗಿರಿ ಬೆಟ್ಟ...ಮುಂಜಾನೆಯ ಹಾಗು ಸವಿ ಸಂಜೆಯ ಪ್ರಕೃತಿ ಸೊಬಗನ್ನು ಇಂತಹ ಬೆಟ್ಟಗಳ ಮೇಲಿನಿಂದ ನೋಡಬೇಕು..ಆಹಾ ಎಂಥ ಪ್ರಕೃತಿ ಸೌಂದರ್ಯ ...
ಬೆಟ್ಟದ ತಪ್ಪಲಲ್ಲಿ ಇದ್ದ ಒಂದು ಚಿಕ್ಕ ಕೆರೆ, ಹಳ್ಳಿ ಜನರ ಓಡಾಟ, ಹಕ್ಕಿಗಳ ಗೂಡು ಸೇರುವ ತವಕ. 
ಕೆರೆ ಪಕ್ಕದ ಕಾಲಿ  ಜಾಗದಲ್ಲಿ ಲೋಕದ ಪರಿವೆ ಇಲ್ಲದೆ ಒಂದಷ್ಟು ನಾಯಿಗಳ ಆಟೋಟ...
ಇದಾವುದರ ಪರಿವೇ ಇಲ್ಲದೆ ಸೂರ್ಯ , ತನ್ನ ಪಾಡಿಗೆ ಕೆಲಸ ಮುಗಿಸಿ, ವಿರಮಿಸುವ ಪರಿ..
ನೀಲಿ ಆಗಸದಲ್ಲಿ ಚಂದ್ರ ನಕ್ಷತ್ರ ಗಳ ಗೋಚರ,,,,    ಪ್ರಕೃತಿ ಯಾವಾಗಲು ವಿಸ್ಮಯ ಪಾತ್ರೆ.. ಅಲ್ವ 









Monday, July 25, 2022

ಮಕ್ಕಳು ಮತ್ತು ಪರಿಸರ ಹಾಗು ವನದರ್ಶನ ಪ್ರವಾಸ

 



ನಾಗಮಂಗಲ ಕನ್ನಡ ಸಂಘ ವತಿ ಇಂದ ಆಯೋಜಿಸಿದ್ದ ಚಿಕ್ಕ ಮಕ್ಕಳ "ವನಪ್ರವಾಸಕ್ಕೆ" ನನ್ನನ್ನು ಪಕ್ಷಿಗಳ ಬಗ್ಗೆ ಹಾಗು ಪರಿಸರದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿಸಿಕೊಡಲು ಕರೆದಿದ್ದರು.
ನಾಗಮಂಗಲ ತಾಲೂಕಿನ ಚೆನ್ನಸಂದ್ರ ಹತ್ತಿರ ಇರುವ ಕಿರು ಅರಣ್ಯಕ್ಕೆ ಚಿಕ್ಕಮಕ್ಕಳ ಸಮೇತ ನಾವೆಲ್ಲ ಹೋಗಿದ್ದೆವು.
ಬೇರೆ ಬೇರೆ ಶಾಲೆಗಳಿಂದ ಆಯ್ದ ಸುಮಾರು ಮೂವತ್ತು ೩೦ ಜನ ಶಾಲೆ ಮಕ್ಕಳು ಬಂದಿದ್ದರು.


ನಾಗಮಂಗಲ ತಾಲೂಕಿನ ಕನ್ನಡ ಸಂಘ ಅದ್ಭುತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಚಿಕ್ಕ ಮಕ್ಕಳ ಉತ್ಸಾಹ .. ಅವರ ತರ ತರಹದ ಕುತೂಹಲ ಬರಿತ ಪ್ರಶ್ನೆಗಳು. ಕಾಡಿನ ಪರಿಸರದಲ್ಲಿ ಇವರು ಪಾಲ್ಗೊಂಡ ರೀತಿ.. ನಮಗೆ ಇನ್ನಷ್ಷ್ಟು ಹೇಳಬೇಕು ಎಂದು ಪ್ರೇರೇಪಿಸಿತ್ತು.
ಬೇರೆ ಬೇರೆ ಶಾಲೆಯ ಮಕ್ಕಳು ಎಲ್ಲ ಸೇರಿ ಕಲಿತು ಬೆರೆತು.. ಪರಿಸರದ ಬಗ್ಗೆ , ಪ್ಲಾಸ್ಟಿಕ್ ನಿಂದ ಆಗುವ ಅನಾಹುತದ ಬಗ್ಗೆ , ಪಕ್ಷಿಗಳ ಬಗ್ಗೆ, ಮರ ಗಿಡ ಇವುಗಳ ಬಗ್ಗೆ ಪ್ರತ್ಯಕ್ಷವಾಗಿ ತಿಳಿದು ಕೊಂಡರು...
ನಮ್ಮ ತಂಡದ ಜೊತೆ ಬೆಂಗಳೂರಿನಿಂದ ಬಂದಿದ್ದ.. ವರಪ್ರಸಾದ್ ಮತ್ತು ಕುಟುಂಬ, ಸುರೇಶ ಅವರ ಕುಟುಂಬ ಹಾಗು ರಾಮ್ ಪ್ರಸಾದ್, ರಾಮಚಂದ್ರ ರಾವ್, ಯಶಸ್ವಿ ಜಯಕುಮಾರ್ ಹಾಗು ಭಾಸ್ಕರ ಅವರು ತುಂಬ ಆಸಕ್ತಿ ಇಂದ ಮಕ್ಕಳ ಜೊತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಮಕ್ಕಳ ಜೊತೆ ಕಾಡಿನಲ್ಲಿ ಕಳೆದ ಸಮಯ..  ಕಾಡಿನ ಮಧ್ಯದಲ್ಲೇ ಎಲ್ಲರ ಜೊತೆ ಗೊಡಿ ಮಾಡಿದ ಮಧ್ಯಾಹ್ನದ ಊಟ ...ಆಹಾ ಹಸಿರು ಪರಿಸರದಲ್ಲಿ ಎಂತಹ ಸವಿ ಸಮಯ....


ನಮ್ಮ ತಂಡದ ಚಿಕ್ಕ ಮಕ್ಕಳಾದ ವಿಶೇಷ್ ಹಾಗು ಅಕ್ಷೋಭ್ಯ ತಮ್ಮ ಜೊತೆ ಕೆಲವು ಮಕ್ಕಳನ್ನು ಸೇರಿಸಿಕೊಂಡು ಪಕ್ಷಿಗಳ ಬಗ್ಗೆ ಒಳ್ಳೆ ವಿವರಣೆ ಕೊಡುತ್ತ ಅವರ ಜೊತೆ ಪಾಲ್ಗೊಂಡಿದ್ದು ಖುಷಿ ಕೊಟ್ಟಿತು..
ಒಂದು ಸುಂದರ ಭಾನುವಾರ , ನಾಗಮಂಗಲ ತಾಲೂಕಿನ ಸ್ವಚ್ಛ ಪರಿಸರದಲ್ಲಿ, ಚಿಕ್ಕ ಮಕ್ಕಳ ಜೊತೆ ಕಳೆಯುವ ಒಂದು ಅವಕಾಶ ನಮ್ಮದಾಗಿತ್ತು..
ಇಂತಹ ಅವಕಾಶ ಮಾಡಿ ಕೊಟ್ಟ ನಾಗಮಂಗಲ ತಾಲೂಕಿನ ಕನ್ನಡ ಸಂಘಕ್ಕೆ ನನ್ನ ಅನಂತ ವಂದನೆಗಳು...

ಹೆಚ್ಚಿನ ಫೋಟೋ ಹಾಗು ವಿಡಿಯೋ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು 
https://photos.app.goo.gl/fSR5kgGyWrZdsuA97
https://photos.app.goo.gl/5LVPofDRwsRdHrbp6















                        ಕಾಡಿನ ಮಧ್ಯದಲ್ಲೇ ಚಿಕ್ಕಮಕ್ಕಳ ಜೊತೆ ಸವಿ ಭೋಜನ 




ಪ್ಲಾಸ್ಟಿಕ್  ಬಳಕೆ ಕಡಿಮೆ ಮಾಡುವ  ಬಗ್ಗೆ ಪ್ರತಿಜ್ಞೆ ತೆಗೆದು ಕೊಳ್ಳುತ್ತಾ ಇರುವುದು 




Friday, June 3, 2022

ನಾನು ಮಲ್ಲತಳ್ಳಿ ಕೆರೆ

 




ಆತ್ಮೀಯ ಓದಿರುವ ನಾಗರಿಕ ಸಮಾಜದ ಸತ್ ಪ್ರಜೆಗಳೇ .....
ನಾನು ಬೆಂಗಳೂರಿನ ನಾಗರಬಾವಿ ಸಮೀಪ ಇರುವ ಒಂದು ಕೆರೆ...  ಒಂದು ಕಾಲದಲ್ಲಿ ನೂರಾರು ಕೆರೆಗಳ ನಗರ ಎಂಬಂತೆ ಇದ್ದ ನಮ್ಮ ಬೆಂಗಳೂರಿನ ಹೆಮ್ಮೆಯ ಕೆರೆ ಯಲ್ಲಿ ನನ್ನ ಹೆಸರು ಕೂಡ ಇತ್ತು...
ಇಲ್ಲಿನ ಕಾಂಕ್ರೀಟ್ ಬಡಾವಣೆ ಬರುವ ಮುನ್ನ ಮಳೆಯ ನೀರನ್ನು ಹಿಡಿದು ಕೊಂಡು ನೂರಾರು ಎಕರೆ ವಿಸ್ತೀರ್ಣದ ತೋಟ ಗದ್ದೆಗಳಿಗೆ ನೀರು ಕೊಡುತ್ತಾ ಇದ್ದೆ....
ಆಮೇಲೆ ಬಿಡಿ ಎಲ್ಲಿ ಗದ್ದೆ ತೋಟ..... ಎಲ್ಲಾ ಕಾಂಕ್ರೀಟ್ ಮಯ......
ಮಳೆಗಾಲದಲ್ಲಿ ಇದ್ದ ಕೆಲವು ಮಳೆ ನೀರು ಹರಿಯುವ ಜಾಗಗಳನ್ನು ಅತಿಕ್ರಮ ಮಾಡಿ ನಿಮ್ಮ ನಿಮ್ಮ ಮೋರಿ ನೀರು ಹರಿಯುವಂತೆ ಮಾಡಿದಿರಿ..... ಹೋಗಲಿ ಬಿಡಿ.. ಅದೇ ನೀರನ್ನು ಅವಲಂಬಿಸಿ ಮೀನು, ಕಪ್ಪೆ, ಹಾವು, ಹಾಗೂ ಅನೇಕ ಪಕ್ಷಿ ಸಂಕುಲ ನನ್ನ ಒಡಲಿನಲ್ಲಿ ಇದ್ದವು
ತೀರಾ ಇತ್ತೀಚೆಗೆ ನನ್ನ ಮಡಿಲಿಗೆ ನೂರಾರು ವಲಸೆ ಪಕ್ಷಿ ಬಂದು ಹೋಗುತ್ತಾ ಇದ್ದವು....
ಆದರೆ😔😔.   ಕಳೆದ ಒಂದು ವರ್ಷದಿಂದ .....ನನ್ನ ಮೇಲೆ ಯಾವ ರೀತಿ ಹಾನಿ ಮಾಡುತ್ತಾ ಇದ್ದೀರಾ ಗೊತ್ತಾ.....
ಬೇರೆ ಮಣ್ಣು ತಂದು ಸುರಿದು ನನ್ನ ದೊಡ್ಡ ದಾದ ವಿಸ್ತೀರ್ಣವಾದ ಜಾಗ ವನ್ನು ಇನ್ನೂ ಕಿರಿದು ಮಾಡುತ್ತಾ.....  ಬರೀ ಚರಂಡಿ ನೀರು ತುಂಬುವ ಕೊಚ್ಚೆ ಗುಂಡಿ ಮಾಡುತ್ತಾ ಇದ್ದೀರಿ.....
ಕಳೆದ ಕೆಲವು ವರ್ಷಗಳ ವರೆಗೂ ಇಲ್ಲಿ ಬರುತ್ತಿದ್ದ ಕುರಿ ಮೇಕೆ , ದನ, ಹಾಗೂ ನಾಯಿ ನೀರು ಕುಡಿತ ಇದ್ದವು... ಆದರೆ ಈಗ.... ಛೇ ಇಲ್ಲಿನ ವಾಸನೆಗು ಯಾವ ಪ್ರಾಣಿ ಕೂಡ ಬರೋಲ್ಲ.......
ಆದರೆ ನಿಮಗೆ ಅಂದರೆ ಮನುಷ್ಯ ಪ್ರಾಣಿ ಗೆ ಮಾತ್ರ ಕೊಚ್ಚೆ ಗುಂಡಿ ಮಾಡಿರುವ ಕೆರೆಯ ಮೇಲೆ ... ನೆಡಿಗೆ ಪಥ ಮಾಡಿಕೊಂಡು.... ವಾಕಿಂಗ್ ಮಾಡಬೇಕು....  ಇನ್ನು ಕೆಲವು ಜನಗಳಿಗೆ ಮದ್ಯ ಕುಡಿಯಲು ಹಾಳು ಮಾಡಲು ಒಂದಷ್ಟು ಜಾಗ ಬೇಕು.......
ದಿಕ್ಕಾರ ವಿರಲಿ ನಿಮ್ಮ ಅಭಿವೃದ್ದಿ ಹೆಸರಿನಲ್ಲಿ ಇರುವ ಜಾಗವನ್ನು ಆಕ್ರಮಿಸಿಕೊಂಡು ಹಾಳು ಮಾಡುತ್ತದೆ ಇರುವುದಕ್ಕೆ....
ಅಲ್ಲ ರಾಜಕಾರಣಿ ಗಳಿಗೆ , ಅಭಿವೃದ್ದಿ ಹೆಸರಿನಲ್ಲಿ ದುಡ್ಡು ಮಾಡುವ ಜನರಿಗೆ  ಬುದ್ದಿ ಇಲ್ಲ ಅಂದರೆ ಅವರನ್ನು ಆರಿಸಿ ಕಳುಹಿಸಿದ ನಿಮಗೂ ಬುದ್ದಿ ಇಲ್ವಾ..  ಈ ಕೆರೆಯನ್ನು ಉಳಿಸಬೇಕು ಅಂತ ಅನ್ನಿಸಿಲ್ವಾ......
ಸರಿ ಬಿಡಿ.......ನಾವು ಇಲ್ಲ ಅಂದರೆ ನೀವು ಇನ್ನೆಷ್ಟು ದಿನ ಬದುಕುತ್ತೀರ ನೋಡೋಣ.... 😔😔😔😔😔
ನೊಂದ ಮಲ್ಲತಳ್ಳಿ ಕೆರೆ

Thursday, April 21, 2022

ಪ್ರಕೃತಿ. ಚಾರಣ ...ಬೇಸಿಗೆ ಶಿಬಿರ.... Day 1


ಮಕ್ಕಳ ಜೊತೆಗೆ ಎರಡು ದಿನದ ಪ್ರವಾಸ ಚಾರಣ ಹಾಗೂ ಪ್ರಕೃತಿ ಜೊತೆಗಿನ ಒಡನಾಟ......

ಏಪ್ರಿಲ್ 15ನೇ ತಾರೀಕು 2022, ನಮ್ಮ ಮಕ್ಕಳ ತಂಡ ಚಿಂತಾಮಣಿ ಹತ್ತಿರ ಇರುವ ಮುರುಗಮಲ್ಲ ಎನ್ನುವ ಪ್ರದೇಶಕ್ಕೆ ಹೊರಟಿತ್ತು.

ಹತ್ತು ಮಕ್ಕಳ ಜೊತೆಗೆ ನಾನು ಮತ್ತೆ ನನ್ನ ಮಡದಿ ಶ್ವೇತಾ ಗುಂಪುಗೂಡಿ ಮಕ್ಕಳನ್ನು ಕರೆದುಕೊಂಡು ಮುರುಗಮಲ್ಲಾ ಕ್ಷೇತ್ರಕ್ಕೆ ಹೊರಟೆವು.

ಬೆಂಗಳೂರಿನಿಂದ ಸುಮಾರು 2 ಗಂಟೆಗಳ ಪ್ರಯಾಣ... ಮೊದಲೇ ಟಿಟಿ ಬುಕ್ ಮಾಡಿದ್ದೆವು.. ಬೆಳಗಿನ ಜಾವ ಸುಮಾರು ಐದು ಮೂವತ್ತಕ್ಕೆ ನಮ್ಮ ಪ್ರಯಾಣ ಶುರುವಾಯಿತು. ಚಿಕ್ಕ ಮಕ್ಕಳ ಉತ್ಸಾಹ ಮುಗಿಲುಮುಟ್ಟಿತ್ತು...



ಮೊದಲೇ ಹೇಳಿ ನಿಗದಿಪಡಿಸಿದ ಹಾಗೆ .. ಚಿಕ್ಕಮಕ್ಕಳ ತಂದೆ-ತಾಯಂದಿರು ತನ್ನ ಮಕ್ಕಳನ್ನು ನಿಗದಿ ಮಾಡಿದ ಜಾಗಕ್ಕೆ ತಂದು ಬಿಟ್ಟಿದ್ದರು... ಎಲ್ಲರನ್ನೂ ಕೂಡಿಸಿಕೊಂಡು ಹೊರಡುವುದು ಹೊತ್ತಿಗೆ ಸುಮಾರು ಆರು ಗಂಟೆ ಆಗಿತ್ತು.

ಬೆಂಗಳೂರಿನಿಂದ ನೂರಿಪ್ಪತ್ತು ಕಿಲೋಮೀಟರ್ ದೂರವಿರುವ ಚಿಂತಾಮಣಿ ತಾಲೂಕಿನ ಹತ್ತಿರವಿರುವ ಮುರುಗಮಲೆ ಎನ್ನುವ ಒಂದು ಚಿಕ್ಕ ಊರು.

ಇಲ್ಲಿ ಮೊದಲೇ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರೂಮುಗಳನ್ನು ಹಾಗೂ ಊಟ-ತಿಂಡಿಯ ವ್ಯವಸ್ಥೆ ಗಳನ್ನು ಮಾಡಲಾಗಿತ್ತು.

ಸುಮಾರು ಎಂಟು ಗಂಟೆಯ ಹೊತ್ತಿಗೆ ಇಲ್ಲಿಗೆ ಬಂದು ಸೇರಿ ರೂಮಿನಲ್ಲಿ ತಮ್ಮ ಬಟ್ಟೆ ಸಾಮಾನುಗಳನ್ನು ಇಟ್ಟು. ಬಿಸಿಬಿಸಿಯಾಗಿ ರೆಡಿಯಾಗಿದ್ದ ರೈಸ್ ಬಾತ್ ತಿಂಡಿಯನ್ನು ತಿಂದುಕೊಂಡು. ನಮ್ಮ ಪಯಣ ಶುರುವಾಯಿತು.







ಮೊದಲಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆವರಣ ಹಾಗೂ ಇದರ ಹತ್ತಿರ ಇರುವ ಮುಕ್ತೇಶ್ವರ ಎಂಬ ಇನ್ನೊಂದು ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ನಡೆದುಕೊಂಡು ಹೊರಟೆವು. ಸುಮಾರು ಇಪ್ಪತ್ತು ನಿಮಿಷದ ನಡಿಗೆ. ದಾರಿಯುದ್ದಕ್ಕೂ ಸಿಗುವ ಪಕ್ಷಿಗಳ ಬಗ್ಗೆ ವಿವರಿಸುತ್ತಾ, ಮರಗಿಡಗಳ ಬಗ್ಗೆ ತಿಳಿಸುತ್ತಾ, ಚಿಟ್ಟೆಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುತ್ತಾ ಸಂತೋಷವಾಗಿ ಚಿಕ್ಕ ಬೆಟ್ಟವನ್ನು ಎಲ್ಲಾ ಮಕ್ಕಳು ಹತ್ತಿದರು.

ಕೈರಾತ , ಚಂದ್ರಮುಕುಟ, ಮರಕುಟಿಕ, ಮೈನಾ, ಮುತ್ತು ತರತರಹದ ಚಿಟ್ಟೆಗಳು ನಮ್ಮನ್ನು ಸ್ವಾಗತಿಸಿದರು..

ಮುಕ್ತೇಶ್ವರ ದೇವಸ್ಥಾನ ಆವರಣದ ಒಳಗೆ ಒಂದು ದೊಡ್ಡ ಅರಳಿಮರ, ತಂಪಾದ ಗಾಳಿ ಪ್ರಶಾಂತ ವಾತಾವರಣ, ಹೆಚ್ಚಿನ ಬಿಸಿಲಿದ್ದರೂ ಆಯಾಸ ಆಗದೆ ಇರುವ ಹಾಗೆ ಮಾಡಿತ್ತು.










ಇಲ್ಲಿಂದ ಮುಂದೆ ಕಾಲ್ನಡಿಗೆಯಲ್ಲಿ ಇನ್ನೊಂದು ಬೆಟ್ಟ ಹಾಗೂ ಕುರುಚಲು ಕಾಡುಗಳು ಇರುವ ಪ್ರದೇಶಕ್ಕೆ ನಮ್ಮ ಪ್ರಯಾಣ ಮುಂದುವರಿತು. ದಾರಿಯುದ್ದಕ್ಕೂ ಚಿಕ್ಕಮಕ್ಕಳ ಉತ್ಸಾಹ ಪಕ್ಷಿನೋಟ, ತರತರಹದ ತರಲೆ ಆಟಗಳು..

ಕೈಗೆ ಸಿಕ್ಕ ಹೂವು.. ಗಿಡಗಳ ಎಲೆಗಳು... ತರತರಹದ ಕಾಯಿಗಳು ಇವುಗಳನ್ನು ಸಂಗ್ರಹಿಸುತ್ತ ಕಡಿದಾದ ಬೆಟ್ಟವನ್ನು ಇಳಿಯುತ್ತ ಮುಂದೆ ಸಾಗಿತು ನಮ್ಮ ಚಿನ್ನರ ಗುಂಪು.

ಮುಂದೆ ಸಾಗುತ್ತ ಬಸವಣ್ಣ ಬಾಯಿಂದ ನೀರು ಬರುವ ಜಾಗಕ್ಕೆ ಬಂದೆವು. ಇಲ್ಲಿನ ವಿಶೇಷತೆ ಎಂದರೆ ವರ್ಷಪೂರ್ತಿ ದಿನದ 24 ಗಂಟೆಗಳು ಕೂಡ ಈ ಬಸವಣ್ಣನ ಬಾಯಿಂದ ಯಾವಾಗಲೂ ಶುದ್ಧವಾದ ನೀರು ಬರುತ್ತಿರುತ್ತದೆ.. ಎರಡು ದಿನ ಇಲ್ಲಿ ನೀರನ್ನೇ ನಾವು ಕುಡಿಯುತ್ತಲೇ ಇದ್ದಿದ್ದು... ದೊಡ್ಡದಾದ ಮರಗಳು ಅರಳಿ ಮರ, ಬೇವಿನ ಮರ, ಹೊಂಗೆ ಮರ, ತಂಪಾದ ಜಾಗದಲ್ಲಿ ಅಲ್ಲೇ ಇದ್ದ ಒಂದು ಚಿಕ್ಕ ವಾನರ ಅಂದರೆ ಕೋತಿಗಳ ಸಂಸಾರದ ಜೊತೆ ಚಿಕ್ಕ ಕೋತಿ ಮರಿಯ ಆಟಗಳನ್ನು ನೋಡುತ್ತಾ. ನಮ್ಮ ಕಪಿ ಸೈನ್ಯ ಅದರ ಜೊತೆಗೆ ತಮಾಷೆ ಮಾಡುತ್ತಾ ನಿಂತಿತ್ತು....



ಬಸವಣ್ಣನ ಬಾಯಿ ಇಂದ ನೀರು ಬರುವ ಜಾಗ 
















ಅಲ್ಲಿಂದ ಮುಂದೆ ದೇವಸ್ಥಾನದ ಆವರಣದಲ್ಲಿ ಸುತ್ತಾಡಿಕೊಂಡು ವಾಪಸ್ ನಾವು ಇಳಿದಿದ್ದ ರೂಮಿನ ಕಡೆ ಬಂದೆವು.

ಈ ಚಿಕ್ಕ ಚಾರಣದಲ್ಲಿ ಅಪರೂಪವಾಗಿ ಕಾಣ ಸಿಕ್ಕ ಹಳದಿ ಗಲ್ಲದ ಪಿಕಳಾರ ... ಎಲ್ಲಾ ಮಕ್ಕಳಿಗೂ ಖುಷಿಕೊಟ್ಟಿತು.