Sunday, July 29, 2018

ಮಲೆನಾಡಿನ ಮಳೆಯ ಜೊತೆಯಲಿ .......



ಮಳೆಯಲ್ಲಿ ನೆನೆಯುವುದಕ್ಕೆ ಮಲೆನಾಡಿಗೆ ಯಾರು ಬರುತ್ತೀರಾ ಅಂತ ನನ್ನ ಸ್ನೇಹಿತರ ಹತ್ರ ಕೇಳಿದೆ.... ಮೊದಲು ಒಂದು ಮೂರ್ನಾಲ್ಕು ಜನ ನಾವು ಬರುತ್ತೇವೆ ಹೋಗೋಣ ಅಂತ ಹೇಳಿದರು, ದಿನಾಂಕ  ಫಿಕ್ಸ್ ಆಯಿತು ,  ಸರಿ ಒಂದು ಆರು ಜನ ಮಾತ್ರ ಬರುತ್ತೇವೆ ಅಂತ ಹೇಳಿದ್ದರು, ಹೊರಡುವ ಒಂದು ದಿನದ ಮುಂಚೆ ಇನ್ನೊಂದಷ್ಟು ಸ್ನೇಹಿತರು ಜೊತೆಯಾದರು, ಒಟ್ಟು 12 ಜನರ ತಂಡ, ಮಳೆಯಲ್ಲಿ ನೆನೆಯುವುದಕ್ಕೆ ಮಲೆನಾಡಿಗೆ ಹೊರಟೆ ಹೊರಟೆವು.... ಈ ವರ್ಷ ಆಗುಂಬೆ ಸುತ್ತ ಮುತ್ತ ,ಮಡಿಕೇರಿಯ ಸುತ್ತಮುತ್ತ ತುಂಬಾ ಜೋರು ಮಳೆ ಎಂದು ಪೇಪರ್ನಲ್ಲಿ ನಲ್ಲಿ ನ್ಯೂಸ್ ನಲ್ಲಿ ನೋಡಿದೆವು, ಆಗುಂಬೆಯ ಕೆಲವು ತಿರುವುಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಹೇಳಲಾಗಿತ್ತು, ಆದರೂ ಸಹ ಅಷ್ಟು ಜೋರು ಜೋರು ಮಳೆಗೆ   ಇದ್ದರೂ ಸಹ ನಾವು ಆಗುಂಬೆಯ ಮಡಿಲಿಗೆ ಹೋಗಲೇಬೇಕು ಮತ್ತು ಮಳೆಯಲ್ಲಿ ನೆನೆಯಲೇ ಬೇಕು ಎಂದು ಹೊರಟಿದ್ದೆವು....!!!

july 21 ಹಾಗು 22 ಶನಿವಾರ ಮತ್ತು ಭಾನುವಾರ ಆಗುಂಬೆ ಮಡಿಲಲ್ಲಿ ನಮ್ಮ ವಾಸ್ತವ..... ಶುಕ್ರವಾರ ರಾತ್ರಿ ಗೌಜು ಗದ್ದಲಗಳ ಶಬ್ದದಿಂದ, ಜಗಮಗಿಸುವ ದೀಪಗಳ ಬೆಳಕಿನಿಂದ, ಹೊಗೆ ಮಿಶ್ರಿತ ಕಲುಷಿತ ವಾದ ಗಾಳಿಯಿಂದ ನಿಧಾನವಾಗಿ ದೂರ ಸಾಗುತ್ತಾ...... ಹಚ್ಚಹಸಿರಿನ ಸ್ವಚ್ಛವಾದ ಪರಿಸರಕ್ಕೆ ಹೊರಟೆವು....

ಬೆಳಿಗ್ಗೆ ತೀರ್ಥಹಳ್ಳಿ ಹತ್ತಿರ ಇರುವ ನಮ್ಮ ಕುವೆಂಪು ಅವರು ಹುಟ್ಟಿದ ಊರಾದ ಕುಪ್ಪಳ್ಳಿ ಪಕ್ಕ ಒಂದು ಹೋಂಸ್ಟೇ ಇನ್ನು ಮೊದಲೇ ಬುಕ್ ಮಾಡಿದ್ದೆವು.... ಅಲ್ಲಿಗೆ ತಲುಪಿದಾಗ ಬೆಳಿಗ್ಗೆ ಸುಮಾರು ಆರು ಗಂಟೆ ಆಗಿರಬಹುದು.... ದಟ್ಟವಾದ ಮೋಡಗಳಿಂದ... ಹಾಗೂ ಹೀಗೂ ಮಾಡಿ ಸೂರ್ಯ ಹೊರಬರುವುದಕ್ಕೆ ಪ್ರಯತ್ನ ಪಡ್ತಾ ಇದ್ದ ... ಶಿವಮೊಗ್ಗ ದಾಟಿ ತೀರ್ಥ ಹಳ್ಳಿ ಹತ್ತಿರ ಬರುತ್ತಿರುವಾಗಲೇ ನಮಗೆ ಮಲೆನಾಡಿನ  ಮಳೆಯ ಸೊಬಗು ಕಾಣಿಸತೊಡಗಿತ್ತು.... ಒಂದೇ ಸಮನೆ ಬೀಳುತ್ತಿರುವ ಮಳೆ.... ಜೋರಾಗಿ ಅಲ್ಲದೇ ಇದ್ದರೂ... ನಿಧಾನಕ್ಕೆ ಸುರಿಯುತ್ತಾ ಇತ್ತು... ಸುತ್ತಮುತ್ತಲೆಲ್ಲ ಮಳೆಯ ರಭಸಕೆ ಮಿಂದು ಒದ್ದೆಯಾದ ಕಪ್ಪಗಿನ ರಸ್ತೆಗಳು... ಒಂದೇಸಮನೆ ನೀರನ್ನು ಕುಡಿದು ಏಳುವುದಕ್ಕೂ ಸಾಧ್ಯವಿರದ ಮರದ ಹಸಿರಿನ ಎಲೆಗಳು.... ಚಿಕ್ಕ ಪುಟ್ಟ ಗಿಡ ಬಳ್ಳಿಗಳು.... ರಸ್ತೆಯುದ್ದಕ್ಕೂ ಕಾಣಸಿಗುವ ಅಕ್ಕಪಕ್ಕದ ಮಳೆಯಿಂದ ತುಂಬಿರುವ ಚಿಕ್ಕ ಚಿಕ್ಕ ಕೊಳ್ಳಗಳು ಇವೆಲ್ಲವೂ ನಮ್ಮ ಬರುವಿಕೆಗಾಗಿ... ಕಾದಿತ್ತು ....

ರಾತ್ರಿಯೆಲ್ಲಾ ನಮ್ಮ ಟಿ ಟಿ ನಲ್ಲಿ ಉಭಯ ಕುಶಲೋಪರಿ ಮಾತುಕತೆಗಳು.... ಒಂದು ಗಂಟೆಯ ತನಕ ನಡೆದಿತ್ತು ಅದಾದ ನಂತರ ಎಲ್ಲರೂ ನಿದ್ರೆಯಲ್ಲಿ ಜಾರಿದರು... ಆದರೆ ಮಧು ಮತ್ತೆ ಮನೋಜ್ ಎಂಬ ಚಡ್ಡಿ ದೋಸ್ತುಗಳು.... ಒಂದು ತರ ನೆಂಟರು ಹೌದು ..... ನಮಗ್ಯಾರಿಗೂ ನಿದ್ದೆಯನ್ನು ಮಾಡಲಿಕ್ಕೆ ಬಿಡಲು ತಯಾರಿರಲಿಲ್ಲ... ತುಂಬಾ ದಿನ ಆಗಿತ್ತು ಅಂತ ಕಾಣುತ್ತೆ ಸಿಕ್ಕಿ... ಅವರು ಕೂಡ ತುಂಬಾ ಜಾಸ್ತಿ  ಸುತ್ತಾಡುತ್ತಾ ರಂತೆ ಅದರಿಂದ ಅವರು  ಎಲ್ಲೆಲ್ಲಿ ಹೋಗಿದ್ದರು  ಅದೆಲ್ಲಾ ಕಥೆಗಳು ನಮ್ಮ ಟಿ ಟಿ ನಲ್ಲಿ ಶುರುವಾಗಿ, ನಮಗೆ ನಿದ್ರೆ ಇಲ್ಲದಂತಾಗಿ ..ಕಣ್ಣು ಮುಚ್ಚಿದರು ಕೂಡ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ..... ಒಂದರ್ಧ ಗಂಟೆಯಲ್ಲಿ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರ ಕರ್ನಾಟಕ ಗೋವಾ ಎಲ್ಲಾ ಗಡಿಗಳನ್ನು ದಾಟಿ ಸುತ್ತಿ ಬಂತು ಇವರ ಮಾತುಕತೆ...:-)

ಕುಪ್ಪಳ್ಳಿಯ ಪಕ್ಕ ಬೆನಕ ನೂರಿನ  ಸುಬ್ಬಣ್ಣನ ಮನೆ ತಲುಪಿದಾಗ ಆರು ಗಂಟೆ.. ಸಣ್ಣಗೆ ಬೀಳುತ್ತಿರುವ ಮಳೆಯಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ರೂಮುಗಳನ್ನು ಸೇರಿಕೊಂಡೆವು... ಮೊದಲೇ ಪ್ಲಾನ್ ಮಾಡಿದ್ದ ಹಾಗೆ ಆದಷ್ಟು ಬೇಗನೆ ಫ್ರೆಶ್ ಆಗಿ ಮುಂದಿನ ಸ್ಥಳಗಳಿಗೆ ಹೊರಡಬೇಕಿತ್ತು ಆದ ಕಾರಣ ಎಲ್ಲರಿಗೂ ಕೂಡ ಈಗ ಬರಬೇಕೆಂದು ಹೇಳಿದ್ದೆ.... ಕಾಫಿ ಬರುವುದು ಸ್ವಲ್ಪ ತಡವಾಯಿತು... ಆದರೂ ನಿಧಾನವಾಗಿ ಕಾಫಿ ಕುಡಿದು 7 :30 ಸುಮಾರಿಗೆ... ನಮ್ಮ ಮಳೆಗಾಲದ ನಡಿಗೆ ಶುರುವಾಯಿತು.. ಅಲ್ಲೇ ಪಕ್ಕದಲ್ಲಿ ಇರುವ ಕುವೆಂಪು ಅವರ ಮನೆ ಹಾಗೂ ಕವಿಶೈಲಕ್ಕೆ ಹೋಗಬೇಕೆಂದು ನಡೆದುಕೊಂಡೆ ಹೊರಟೆವು... ಸುಮಾರು ಒಂದು ಎರಡು ಕಿಲೋಮೀಟರ್ ಆಗಬಹುದು... ಕೈಯಲ್ಲಿ ಕೊಡೆ, ರೈನ್ ಕೋಟ್, ಎಂತಹ ಜೋರು  ಮಳೆ ಬಂದರೂ ಪರವಾಗಿಲ್ಲ ಎಂದು,,, ನಮ್ಮ ಪಯಣ ಹೊರಟಿತು , ಸುತ್ತಲೂ ಹಚ್ಚಹಸುರಿನ ಗಿಡ ಮರಗಳು ಯಾವ ಗದ್ದೆಗಳನ್ನುಕೂಡ ಬಿಡದೆ... ಎಲ್ಲೆಂದರಲ್ಲಿ ಚಿಕ್ಕ ಚಿಕ್ಕ ಝರಿಗಳಾಗಿ ಹರಿಯುತ್ತಿರುವ  ಜೋರು ಮಳೆ ನೀರು ..... ಎಲ್ಲಿ ನೋಡಿದರಲ್ಲಿ ನೀರೇ ನೀರು.... ಕುವೆಂಪುರವರ ಮನೆ ತಲುಪಲು ಒಂದಿಪ್ಪತ್ತು ನಿಮಿಷ ಬೇಕಾಯಿತು.... ಕುವೆಂಪುರವರ ಮನೆಯ ಸುತ್ತಮುತ್ತ ಸುತ್ತಾಡಿ ಕವಿಶೈಲದ ಹತ್ತಿರ ಸ್ವಲ್ಪ ಹೊತ್ತು ನಡೆದಾಡಿ ತಿಂಡಿ ತಿನ್ನಲು ಹೊತ್ತಾಗುತ್ತದೆ ಎಂದು ಬೇಗ ಬೇಗ ಬಂದೆವು.... ಸ್ನಾನ ಮುಗಿಸಿ ತಿಂಡಿ ತಿನ್ನುವಷ್ಟರಲ್ಲಿ 10.30 ಆಗಿತ್ತು... ಮಲೆನಾಡಿನ ಕಡಬು ಹಾಗೂ ಕಾಯಿ ಚಟ್ನಿ ತುಂಬಾ ಚೆನ್ನಾಗಿ ಮಾಡಿದ್ದರು ತಿಂಡಿ ತಿಂದು ಮತ್ತೊಂದು ಸಾರಿ ಕಾಫಿ ಕುಡಿದು ಅಲ್ಲಿಂದ ಮುಂದೆ ಹೊರಟಿತು  ನಮ್ಮ ಪಯಣ..

ಕಳೆದ ರಾತ್ರಿ ನಿದ್ದೆ ಇಲ್ಲದಿದ್ದರೂ ಕೂಡ ಮಲೆನಾಡಿನ ಅಹ್ಲಾದಕರ ವಾತಾವರಣವು ಎಲ್ಲರಲ್ಲೂ ಚೈತನ್ಯವನ್ನು ಉಂಟುಮಾಡಿತ್ತು.... ಅದೇ ಜೋಶ್ ನಲ್ಲಿ ಮುಂದೆ ಹೊರಟರು, ಮೊದಲು ಚೆಬ್ಬಿಲುಗುಡ್ಡ ಎನ್ನುವ ಒಂದು ದೇವಸ್ಥಾನ..

ದೇವಸ್ಥಾನದ ಹಿಂಭಾಗ ಹರಿಯುವ ತುಂಗಾನದಿಯಲ್ಲಿ ತುಂಬಾ ಮೀನುಗಳು ಇರುತ್ತವಂತೆ ಅದಕ್ಕೆ ಆಹಾರವನ್ನು ಕೊಡಬಹುದಾಗಿತ್ತು ಆದರೆ ತುಂಬಾ ಮಳೆಯ ಕಾರಣ ತುಂಗಾ ನದಿಯು ತುಂಬಾ ರಭಸವಾಗಿ ಹರಿಯುತ್ತಿದ್ದಳು... ಕೆಳಗೆ  ಇಳಿಯುವುದಿರಲಿ ... ಮೇಲೆ ನಿಂತು ನೋಡುವುದೇ ಒಂದು ಭಯಾನಕ  ದೃಶ್ಯವಾಗಿತ್ತು ....!! ಅಷ್ಟು ಜೋರಾಗಿ ರಭಸದಿಂದ ಹರಿಯುತ್ತಿದ್ದಳು ನಮ್ಮ ತುಂಗಾ ನದಿ, ಅಲ್ಲಿಂದ ಮುಂದೆ, ಭೀಮನಕಟ್ಟೆ ಎನ್ನುವ ಮತ್ತೊಂದು ಪ್ರೇಕ್ಷಣೀಯ ಸ್ಥಳಕ್ಕೆ ಹೊರಟೆವು ಮಧ್ಯದಲ್ಲಿ ತುಂಬಾ ಹಳೆಯದಾದ ಒಂದು ದೇವಸ್ಥಾನವೂ ಸಿಗುತ್ತದೆ, ಅದರಿಂದ ಮುಂದೆ ಒಂದು ಚಿಕ್ಕ ದೇವಸ್ಥಾನ ಅದೇ ಭೀಮನಕಟ್ಟೆ... ತೀರ್ಥಹಳ್ಳಿಯಿಂದ ಒಂದು 15ರಿಂದ 20 ಕಿಲೋಮೀಟರ್ ದೂರದಲ್ಲಿ ಇದೆ.. ಇಲ್ಲೂ ಕೂಡ ನೀರಿನಲ್ಲಿ ಆಟವಾಡಲು ಅವಕಾಶವಿತ್ತಾದರೂ ತುಂಬಾ ಮಳೆಯ ಕಾರಣ ಸಾಧ್ಯವಾಗಲಿಲ್ಲ ಅದೇ ತುಂಗಾ ನದಿಯು ಇನ್ನು ಜೋರಾಗಿ ಭೋರ್ಗರೆಯುತ್ತಾ  ಹರಿಯುತ್ತಾ  ಇದ್ದಳು.... ಇದರ ಸಮೀಪದಲ್ಲಿ ಒಂದು ತೂಗುಸೇತುವೆ ಇದೆ.. ಪಕ್ಕದಲ್ಲಿ ಹಳ್ಳಿ ಅವರಿಗೆ ಇದೇ ಆಧಾರ.... ತುಂಬಾ ಅದ್ಭುತವಾದ ತೂಗು ಸೇತುವೆ ಫೋಟೋಗ್ರಫಿಗೆ ಹೇಳಿಮಾಡಿಸಿದಂತಿತ್ತು... ನಮ್ಮ ತಂಡದವರು ಎಷ್ಟು ಫೋಟೋಗಳನ್ನು ತೆಗೆದುಕೊಂಡರೋ...  ತುಂಗಾ ನದಿಯ ರಭಸದ ನೀರಿನ ಸೆಳೆತ... ಮೇಲ್ಗಡೆ ಕಬ್ಬಿಣದ ತೂಗು ಸೇತುವೆ ಮನಮೋಹಕ ರುದ್ರ ರಮಣೀಯ ದೃಶ್ಯ, ಅದರಲ್ಲಿ ಬಿಟ್ಟು ಬಿಟ್ಟು ಬರುವ  ಮಳೆ ......  ಒಟ್ನಲ್ಲಿ   ಮಲೆನಾಡ ಮಳೆ ನಲ್ಲಿ ಒಳ್ಳೆ ಅನುಭವ..... :-)






ಮೊದಲೇ ತಂದಿದ್ದ ಮಧ್ಯಾನದ ಊಟವನ್ನು ಈ ತೂಗುಸೇತುವೆಯ ಸಮೀಪ, ಮಳೆಯಲ್ಲೇ ನೆನೆದು.... ತಿಂದೆವು ... ಹಾಗೆ ಬರುತ್ತಿರುವ ಮಳೆಯಲ್ಲೇ ಕೈ ತೊಳೆದು ........ ಅಲ್ಲಿಂದ ಹೊರಟಾಗ ಮಧ್ಯಾನ 1:30

......

ನಮ್ಮ ಮುಂದಿನ ಜಾಗ ಕವಲೇ ದುರ್ಗಾ ಎಂಬ ಕೋಟೆ...... ಇದರಲ್ಲಿ ಚಾರಣ ಮಾಡ ಬೇಕಿತ್ತು ...







ಕವಲೇದುರ್ಗ ಸಮೀಪ ಬರುತ್ತಾ ಇರುವಂತೆ... ಜೋರು ಮಳೆ..... ಒಂದು ಐದುನಿಮಿಷ ಕಾಯ್ದೆವು...... ಮಳೆ ನಿಲ್ಲುವ ಯಾವ ಲಕ್ಷಣಗಳು ಇಲ್ಲ..... ಅಲ್ಲೇ ಇರುವ ಅಂಗಡಿಯವರು ಹೇಳಿದರು.... ಬೇಗ ಹೋಗಿ ಬನ್ನಿ... ಇಲ್ಲ ಅಂದ್ರೆ ಸಂಜೆ ಮಳೆ ಇನ್ನು ಜೋರು ಇರುತ್ತೆ ಅಂತ.. ಸರಿ.... ನಾನು ನನ್ನ ಕ್ಯಾಮೆರಾ ವನ್ನು ತೆಗೆದು ಕೊಳ್ಳಲು ಮನಸ್ಸು ಮಾಡಲಿಲ್ಲ..... ಹೇಗಿದ್ದರೂ ಫೋನ್ ಇದೆ ಅದೇ ಸಾಕು ಅಂತ..... ಜೋರು ಮಳೆಯಲ್ಲೇ ನಮ್ಮ ಚಾರಣ ಶುರುವಾಯಿತು.......

ಬೆಟ್ಟದ ತಪ್ಪಲಿಗೆ ತಲುಪಲು ಒಂದು ಚಿಕ್ಕದಾದ ಹಸಿರು ಗೆದ್ದೆಯನ್ನು ಧಾಟಿ ಮುಂದೆ ಹೋಗಬೇಕು..... ಅಬ್ಬ... ಮಳೆಗೆ ಅ ಗದ್ದೆ...ಸಂಪೂರ್ಣ ಮುಳುಗಿತ್ತು..... ಪಕ್ಕದಲ್ಲೇ ಇರುವ ಒಂದು ಬಂಡೆ ಕಲ್ಲಿನ ಮೇಲೆನಿಂದ ಸಣ್ಣ ಝರಿ ....... ಗದ್ದೆಯ ತುಂಬೆಲ್ಲ ನೀರು...... ಮಳೆಯ ನೀರಿನ  ಸಪ್ಪಳ......ಸುತ್ತಲು ಇರುವ ಹಸಿರಿನ ವನಸಿರಿ..... ಅದನ್ನು ನೋಡಲು ಎರಡು ಕಣ್ಣು ಸಾಲದು.....

ಹಾಗೆ ಮುಂದೆ ಸಾಗಿದರೆ ನಾವು ನಡೆಯುವ ದಾರಿಯಲ್ಲೇ ಉತ್ಪತ್ತಿ ಯಾದ ಸಣ್ಣ ಸಣ್ಣ ನೀರಿನ ಹರಿವು  ಬೆಟ್ಟದ ಮೇಲಿನಿಂದ ಕೆಳಗೆ ಬರುತ್ತಾ ಇತ್ತು.... ಕಪ್ಪು ಕಲ್ಲುಗಳು.... ಮಳೆಯ ನೀರಿನ ದೆಸೆಯಿಂದ ಸಂಪೂರ್ಣ ಪಾಚಿ ಮಾಯಾ.... ಎಲ್ಲಿ ನೋಡಿದರಲ್ಲಿ ಹಚ್ಚ ಹಸುರಿನ ಪಾಚಿಗಳು..... ನಿದಾನವಾಗಿ ಬೆಟ್ಟ ಹತ್ತ ಬೇಕಾದ ಅನಿವಾರ್ಯತೆ.... ಅದರೆಲ್ಲಿ ನಮ್ಮ ಸಂಗಡ ಬಂದಿದ್ದ .... ಕೆಲ ಹೆಣ್ಣು ಮಕ್ಕಳು... ಕಾಲು ಇಡುವುದಕ್ಕೆ ಹೆದರುತ್ತ ಇದ್ದರು... ಅವರನ್ನು ಸಾಗು ಹಾಕಿಕೊಂಡು ಮುಂದೆ ಬರುವಷ್ಟರಲ್ಲಿ...... ಸಾಕಾಗಿತ್ತು.... :-)

ನಿಜವಾಗಲು ಒಮ್ಮೆ ಮಳೆಗಾಲದಲ್ಲಿ ಈ ಬೆಟ್ಟ ಹತ್ತಬೇಕು ಕಣ್ರೀ... ಅದ್ಬುತವಾದ ಅನುಭವ.....

" ಸಾಗುವ ದಾರಿಯಲ್ಲೇ ಸಿಗುವ ಚಿಕ್ಕ ಹಾಗು ದೊಡ್ಡ ಝರಿ ಗಳು... ನಮ್ಮ ಮಳೆ ಕಾಲದ ಸ್ನೇಹಿತರಾದ ಬಸವನ ಹುಳ. ಕಂಬಳಿ ಹುಳ.. ಜಿಗಣೆ..... ಚಿಕ್ಕ ಚಿಕ್ಕ ಮರಿ ಕಪ್ಪೆಗಳು..... ಅಬ್ಬ ಪ್ರಕೃತಿ ವಿಸ್ಮಯನ ಅನುಭವಿಸಿ ನೋಡಬೇಕು......."

ಕವಲೇ ದುರ್ಗದ ಬೆಟ್ಟದ ಮಧ್ಯದಲ್ಲಿ ಒಂದು ಪಾಳು ಬಿದ್ದ ಅರಮನೆ , ಹಳೇಯ ದೇಗುಲ, ನಂದಿ, ಇದೆ... ತುಂಬ ಚೆನ್ನಾಗಿ ಇದೆ.. ಬೆಟ್ಟದ ಪಾಳುಬಿದ್ದ ಅರಮನೆ ಮಧ್ಯ ಒಂದು ಕಲ್ಯಾಣಿ ಇದೆ.... ವಃ ಎಂಥ ಅದ್ಬುತವಾದ ಜಾಗ ಇದು.... ಆಗಿನ ಕಾಲದಲ್ಲಿಹೇಗೆ ಇದ್ದಿರ ಬಹುದು......

ಇದರ ಬಗ್ಗೆ ಒಂದು ಒಳ್ಳೆ ಇತಿಹಾಸ ವಿದೆ.... ಅದನ್ನು ಮತ್ತೊಮ್ಮೆ ಹೇಳುವೆ..

ಇಲ್ಲಿಂದ ಕೆಳಗೆ ಬಂದಾಗ ಸುಮಾರು ಆರು ಘಂಟೆ ಆಗಿತ್ತು... ಎಲ್ಲರೂ ನಡೆದಾಡಿ ಸುಸ್ತಾಗಿದ್ದರು.... ಸರಿ ಬೇರೆ ಎಲ್ಲೂ ಬೇಡ ಎಂದು ಕುಪ್ಪಳ್ಳಿಯ ಹೋಂ ಸ್ಟೇ ಕಡೆ ಹೊರಟೆವು... ಅಲ್ಲಿಗೆ ತಲುಪಿದಾಗ ೭ ಘಂಟೆ... ಕಾಫಿ ಕುಡಿದು... ನಾನು ಮತ್ತೆ ನಮ್ಮ ತಂಡದ ನವೀನ ನ ಜೊತೆ ಮ್ಯಾಕ್ರೋ ಫೋಟೋ ತೆಗೆಯೋಣ ಅಂತ ಪಕ್ಕದಲ್ಲಿ ಇದ್ದ ಅಡಿಕೆ ತೋಟಕ್ಕೆ ಹೊರಟೆವು..... ಹಾವು ಕಪ್ಪೆಗಳನ್ನು ಹಿಡಿಯಲು..... ಅದು ಕತ್ತಲಲ್ಲಿ... ಬರಿ ಟಾರ್ಚ್ ಲೈಟ್ ನಲ್ಲಿ..... ಮಜಾ ಇದೆ ಅಲ್ವ.... ಮಧ್ಯದಲ್ಲಿ ಎಲ್ಲಿ ಹಾವುಗಳು ಬರುತ್ತವೋ ಗೊತ್ತಿರೋಲ್ಲ.... ಆದರು ಒಂದು ಥರ ಮೊಂಡು ದೈರ್ಯ.... ನಮ್ಮ ಬ್ಯಾಡ್ ಲಕ್... ಹಾವುಗಳು ಸಿಗಲಿಲ್ಲ... ಆದರೆ ಕೆಲವೊಂದು ಕಪ್ಪೆಗಳು ಸಿಕ್ಕವು..... ವಾಪಸ್ ಬಂದು ಊಟ ಮಾಡಿ ಮಲಗುವ ಹೊತ್ತಿಗೆ ಹತ್ತು ವರೆ ಯಾಗಿತ್ತು...






ನಮ್ಮ ಪ್ರವಾಸದ ಸಂಪೂರ್ಣ ಕಿರು ಚಿತ್ರಣ ಇಲ್ಲಿದೆ ನೋಡಿ 




ಮುಂದಿನ ಲೇಖನದಲ್ಲಿ (ಕುಪ್ಪಳ್ಳಿ, ಕುಂದಾದ್ರಿ.. ಹಾಗು ಭದ್ರಾ ಜಲಾಶಯದ ಎರಡನೇ ದಿನದ ಮಾಹಿತಿ)

Thursday, June 28, 2018

ಜೋಗಿಮಟ್ಟಿ - ಕರ್ನಾಟಕದ ಊಟಿ

ಜೋಗಿಮಟ್ಟಿ - ಕರ್ನಾಟಕದ ಊಟಿ
ಚಿತ್ರದುರ್ಗ ಎಂದಾಕ್ಷಣ ನಮಗೆ ನೆನಪಾಗುವುದು ಏಳು ಸುತ್ತಿನ ಕಲ್ಲಿನ ಕೋಟೆ, ಸುತ್ತಲೂ ಕಲ್ಲುಗಳಿಂದ ಕೂಡಿರುವ ಪ್ರದೇಶ , ಬಯಲು ಸೀಮೆಯ ಬೆಂಗಾಡು ಎಂದು .. ಆದರೆ ಇಲ್ಲೂ ಕೂಡ ಒಂದು ರಮಣೀಯವಾದ ಗಿರಿಧಾಮವಿದೆ, ಇದರ ಹೆಸರು ಜೋಗಿಮಟ್ಟಿ ಎಂದು, ಹಚ್ಚಹಸಿರಿನ ಸುಂದರ ಸ್ವಚ್ಛಂದ ಪರಿಸರ, ಅದ್ಭುತವಾದ ಜಾಗ, ಇದೊಂದು ರಕ್ಷಿತಾರಣ್ಯ ಪ್ರದೇಶ ಆದ ಕಾರಣ ಜನರಿಗೆ ಇದರ ಒಳಗೆ ಹೋಗಲು ಅರಣ್ಯಾಧಿಕಾರಿಗಳ ಅನುಮತಿ ಪತ್ರ ಬೇಕು.. ಇದು ಕರ್ನಾಟಕದ ಊಟಿ ಅಂತ ಕೂಡ ಕರೀತಾರಂತೆ...

ಈ ಸುಂದರ ಗಿರಿಧಾಮ ಚಿತ್ರದುರ್ಗದಿಂದ ಕೆಲವು ಕಿಲೋಮೀಟರ್ ಗಳ ದೂರದಲ್ಲಿದೆ ಇಲ್ಲಿಗೆ ಹೋಗಲು... ಚಿಕ್ಕದಾದ ರಸ್ತೆ ಕೂಡ ಇದೆ. ಸಮುದ್ರಮಟ್ಟದಿಂದ 3643 ಅಡಿ ಇರುವ ಈ ಪ್ರದೇಶವು ಸುಂದರ ಗಿರಿಧಾಮಗಳಲ್ಲಿ ಒಂದು, ಇದರ ರಮಣೀಯತೆ ಮುಂಗಾರಿನ ಮಳೆಯ ಕಾಲದಲ್ಲಿ ಅತಿ ಅದ್ಭುತವಾಗಿರುತ್ತದೆ, ಜೋರಾಗಿ ಬೀಸುವ ಗಾಳಿ, ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ, ಮೋಡಗಳ ನಡುವೆಯೇ ಸಾಗುತ್ತಿರುವಂತೆ ಅನುಭವ, ಸುಮಾರು 150 ಕ್ಕೂ ಹೆಚ್ಚು ಪಕ್ಷಿಗಳಿಂದ ಪ್ರಬೇದದಿಂದ ಕೂಡಿರುವ ಚಿಲಿಪಿಲಿ ಕಲರವ.. ಈ ಜಾಗಕ್ಕೆ ಸಾಗುತ್ತಿದ್ದ ಹಾಗೆ ಹೆಚ್ಚಿನ ಸಂಖ್ಯೆಯಲ್ಲಿರುವ ನವಿಲುಗಳು ನಮ್ಮನ್ನು ಸ್ವಾಗತಿಸುತ್ತವೆ. ಮಳೆಗಾಲದಲ್ಲಿ ಹಾಗೂ ಮುಂಗಾರಿನಲ್ಲಿ ಇದೊಂದು ಅದ್ಭುತವಾದ ಪ್ರದೇಶ.

ತುಂತುರು ಮಳೆ ಗಳ ಜೊತೆಯಲ್ಲಿ, ಮೋಡಗಳ ಜೊತೆಯಲ್ಲಿ ,,,,ಬೆಳ್ಳಂಬೆಳಿಗ್ಗೆ ಕೆಲ ಹೊತ್ತು ಇಲ್ಲಿ ಕಳೆಯುವ ಅವಕಾಶ ಸಿಕ್ಕಿತ್ತು.... ವಾಹ್ ಎಂತಹ ಅನುಭವ ಅದು, ಕೆಲವೊಂದು ಸಾರಿ ಮೋಡಗಳು ಹಾಗೂ ಮಂಜು ಎಷ್ಟು ದಟ್ಟವಾಗಿತ್ತು ಎಂದರೆ ಹತ್ತು ಇಪ್ಪತ್ತು ಮೀಟರ್ ಮುಂದೆ ಇರುವ ಮನುಷ್ಯರು ಕೂಡ ಕಾಣಿಸುತ್ತಾ ಇರಲಿಲ್ಲ..

ಮಳೆಗಾಲದಲ್ಲಿ ಚಿತ್ರದುರ್ಗಕ್ಕೆ ಹೋದರೆ ಖಂಡಿತ ಇಲ್ಲಿಗೆ ಹೋಗಿ ಬನ್ನಿ ಆದರೆ ಪರಿಸರಕ್ಕೆ ಮಾತ್ರ ಹಾನಿ ಮಾಡಬೇಡಿ










ರಸ್ತೆಗಳು --- ಬದುಕಿನ ಪಯಣವೂ

ರಸ್ತೆಗಳು --- ಬದುಕಿನ ಪಯಣವೂ 

ನನಗೊಂದು ಹುಚ್ಚು ಆಸೆ... ದಾರಿಯಲ್ಲಿ ಹೋಗುತ್ತಿರುವಾಗ ಅಥವಾ ಎಲ್ಲಾದರೂ ಪ್ರವಾಸಕ್ಕೆ ಹೋಗಿದ್ದಾಗ ದಾರಿ ಉದ್ದಕ್ಕೂ ಕಾಣಸಿಗುವ ರಸ್ತೆಗಳನ್ನು ಫೋಟೋ ತೆಗೆಯುವ ಆಸೆ, ಅದೆಷ್ಟು ಫೋಟೋಗಳನ್ನು ತೆಗೆದಿದ್ದೇನೋ ಹೀಗೆ...

ನಮ್ಮ ಬದುಕಿನ ಪಯಣ ಕೂಡ ರಸ್ತೆಯ ರೀತಿಯಲ್ಲಿ ಸಾಗುವುದು, ಒಂದೊಂದು ರೀತಿ, ಒಂದೊಂದು ತರ, ಒಂದೊಂದು ಕಾಲದಲ್ಲಿ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಬದುಕಿನ ಪಯಣದಲ್ಲಿ ನಾವು ಒಗ್ಗಿ ಕೊಳ್ಳಬೇಕು.. ರಸ್ತೆಗಳು ಚೆನ್ನಾಗಿದೆ ಅಂತ ತುಂಬಾ ಜೋರಾಗಿ ಹೊರಟರೆ ಅಪಾಯ ಕಾದಿಟ್ಟ ಬುತ್ತಿ ... ನಮ್ಮ ಬದುಕಿನ ಪಯಣದಲ್ಲಿ ಈ ರಸ್ತೆಗಳಲ್ಲಿ ಕಾಣಸಿಗುವ ಸೌಂದರ್ಯವನ್ನು ಆಸ್ವಾದಿಸುತ್ತಾ ದಾರಿ ಮಧ್ಯದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸುತ್ತಾ ನಮ್ಮ ಗುರಿಯ ಕಡೆಗೆ ಸಾಗಬೇಕು... ರಸ್ತೆಗಳು ಹಾಗೂ ಬದುಕಿನ ಪಯಣದ ದಾರಿ ಒಂದೇ ... ಗುರಿ ಇದ್ದರೆ ಅದಕ್ಕೆ ತಕ್ಕುದಾದ ಪ್ರಯತ್ನವಿದ್ದರೆ ಗುರಿಯನ್ನು ಸುಲಭವಾಗಿ ತಲುಪಬಹುದು

ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುತ್ತದೆ ನಮ್ಮ ರಸ್ತೆಗಳು. ಮಳೆಗಾಲದಲ್ಲಿ ಹಸಿರು ಸಿರಿ ಗಳ ಮಧ್ಯೆ ಸೀಳಿಕೊಂಡು ಹೋಗಿರುವ ಕಪ್ಪು ಬಣ್ಣದ ಗೆರೆಯಂತೆ, ಬೇಸಿಗೆ ಕಾಲದಲ್ಲಿ ಅಕ್ಕಪಕ್ಕ ಒಣಗಿ ಹೋಗಿರುವ ಹುಲ್ಲುಗಳ ನಡುವೆ, ಮರ ಗಿಡಗಳ ನಡುವೆ ಕಪ್ಪಗೆ ಮಲಗಿಕೊಂಡು, ಬಿಸಿಲ ಹೊಡೆತಕ್ಕೆ ಮಿರಿಮಿರಿ ಮಿನುಗುತ್ತಾ ಇರುವ ರಸ್ತೆಗಳು. ಹಾಗೆ ಚಳಿಗಾಲದಲ್ಲಿ ಮುಂಜಾವಿನ ಸಮಯದಲ್ಲಿ ದಟ್ಟ ಮಂಜಿನ ಒಳಗಡೆ ಹುದುಗಿ ಹೋಗಿರುವ ಮಬ್ಬು ಮಬ್ಬಾಗಿರುವ ರಸ್ತೆಗಳು... ಒಟ್ಟಿನಲ್ಲಿ ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುವ, ಹಾಗೆ ಬದುಕಿನ ಪಯಣದ ಹಾದಿ ನೆನಪಿಸುವ ಚಿಕ್ಕ, ದೊಡ್ಡ ರಸ್ತೆಗಳು ಅದ್ಭುತವಾದ ಆನಂದವನ್ನು ಕೊಡುತ್ತದೆ... ಈ ನಡುವೆ ನಮ್ಮ ಕರ್ನಾಟಕದ ರಸ್ತೆಗಳು ಕೂಡ ಅತಿ ಸುಂದರವಾಗಿ ನಾಜೂಕಾಗಿ ನಿರ್ಮಾಣಗೊಂಡಿದೆ, ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ಇಂತಹಾ ರಸ್ತೆಗಳ ಮೇಲೆ ಹೋಗುವುದೇ ಒಂದು ಆನಂದ... ಅದೇ ರೀತಿ ಪರಿಸರಕ್ಕೆ ಹಾನಿಯಾಗದೆ ರೀತಿ ನೋಡಿಕೊಳ್ಳಬೇಕಾದದ್ದು ಕೂಡ ನಮ್ಮ ಕರ್ತವ್ಯ.



ಕರ್ನಾಟಕದ ಕೆಲವೊಂದು ರಸ್ತೆಗಳ ಫೋಟೋಗಳು......


















Saturday, June 23, 2018

ಸಾರ್ಥಕತೆಯ ಭಾವ





ಸಾರ್ಥಕತೆಯ ಭಾವ ....




ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾವು ನಮ್ಮ ಕನ್ನಡ ರಾಜ್ಯೋತ್ಸವದ ಅಂಗವಾಗಿ ,ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕ್ರೂಡೀಕೃತ ವಾದ ಹಣದಲ್ಲಿ ಒಂದು ಭಾಗವನ್ನು ಸದುದ್ದೇಶದಿಂದ ಬಳಸಬೇಕೆಂದು ತೀರ್ಮಾನಿಸಿದ್ದೆವು , ಅದರಲ್ಲಿ ಸ್ವಲ್ಪ ಹಣವನ್ನು ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಇದರ ಬಗ್ಗೆ ಹಾಗೂ ಇದಕ್ಕೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಕಲೆಯನ್ನು ಬೆಳೆಸಿ ಮುತ್ತು ಉಳಿಸುತ್ತಿರುವ ಕಲಾವಿದರಿಗೆ ಕೊಡಬೇಕೆಂದು ತೀರ್ಮಾನ ಮಾಡಿ, ಐವತ್ತು ಸಾವಿರ ರೂಪಾಯಿಗಳನ್ನು "ಜವರಯ್ಯ ಮತ್ತು ಬೋರಮ್ಮ " ಎಂಬ ಜಾನಪದ ಕಲಾವಿದರಿಗೆ ಕೊಟ್ಟಿದ್ದಾಯ್ತು, ಇನ್ನು ಉಳಿದ ಸ್ವಲ್ಪ ಹಣವನ್ನು ಕರ್ನಾಟಕ ಚಿತ್ರರಂಗದ ಹೆಸರಾಂತ ಪೋಷಕ ನಟರಾದ ಸುಮಾರು 600 ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಎಂಬುವರಿಗೆ ಕೊಡಲಾಗಿತ್ತು, ಕೆಲವೊಂದು ನ್ಯೂಸ್ ನಲ್ಲಿ ನೋಡಿದ್ದೆವು ಸತ್ಯಜಿತ್ ಅವರು ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲನ್ನು ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾರೆ ಎಂದು , ಆದ ಕಾರಣದಿಂದ ನಮ್ಮ ಕನ್ನಡ ರಾಜ್ಯೋತ್ಸವ ದಲ್ಲಿ ಬಂದ ಸ್ವಲ್ಪ ಹಣವನ್ನು ಇವರಿಗೆ ನಮ್ಮ ಕಡೆಯಿಂದ ಸ್ವಲ್ಪ ಸಹಾಯವಾಗಲಿ ಎಂದು ಕೊಟ್ಟಿದ್ದೇವೆ .

ಇನ್ನು ಉಳಿದ ಸ್ವಲ್ಪ ಹಣದಲ್ಲಿ ಏನ್ ಮಾಡಬೇಕು ಎಂದು ಯೋಚಿಸುತ್ತಿರುವಾಗ ನಮ್ಮ ಕಂಪನಿಯ ಸಹದ್ಯೋಗಿ ಶೀಲಾ ಅವರು ಒಂದು ಸಲಹೆ ನೀಡಿದರು ದೂರದ ಹಳ್ಳಿಗಳಲ್ಲಿ ಇರುವ ಸರ್ಕಾರಿ ಸ್ಕೂಲುಗಳಲ್ಲಿ ಕಂಪ್ಯೂಟರ್ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬೇಕಾಗುವ ಆಟ ಸಾಮಾನುಗಳು ಅದೇ ರೀತಿ ಕೆಲವೊಂದು ಅತಿ ಅವಶ್ಯಕವಾಗಿ ಇರುವ ವಸ್ತುಗಳನ್ನು ಏಕೆ ಕೊಡಬಾರದು ಎಂದು..... ಸರಿ ಇದು ಒಳ್ಳೆ ಯೋಚನೆಯೇ ಹಾಗೆ ಮಾಡೋಣ ಎಂದು ತೀರ್ಮಾನಿಸಿ ಯಾವ ಸರ್ಕಾರಿ ಶಾಲೆಗೆ ಕೊಡಬೇಕು ಎಂದು ಯೋಚಿಸುತ್ತಿರುವಾಗ, ಶೀಲಾ ಮತ್ತು ಅವರ ಕುಟುಂಬದವರು ಹೋದ ವರ್ಷ ಅವರ ತವರಾದ ಚಿತ್ರದುರ್ಗದಲ್ಲಿ ಒಂದು ಸರ್ಕಾರಿ ಶಾಲೆಗೆ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಕೊಟ್ಟಿದ್ದರು. ಅಲ್ಲಿಗೆ ಕಂಪ್ಯೂಟರ್ ಹಾಗೂ ಕ್ರೀಡಾ ಸಾಮಗ್ರಿಗಳ ಅಗತ್ಯವಿದ್ದು, ಅಲ್ಲಿಗೆ ಕೊಟ್ಟರೇ ಹೇಗೆ ಎಂದು ಸಲಹೆ ಬಂತು... ಸರಿ ಎಲ್ಲರೂ ಒಮ್ಮತದಿಂದ ಚಿತ್ರದುರ್ಗದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಲ್ಲೇ ಹತ್ತಿರದಲ್ಲಿ ಒಂದು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇರುವ ಹಳ್ಳಿಯಲ್ಲಿ ಇನ್ನೊಂದು ಸರ್ಕಾರಿ ಶಾಲೆಯನ್ನು ಆಯ್ದುಕೊಂಡೆವು , ನಮ್ಮ ಉದ್ದೇಶ ಇಷ್ಟೇ ಒಟ್ಟಿನಲ್ಲಿ ಸಂಗ್ರಹ ಸಂಗ್ರಹವಾದ ಹಣವನ್ನು ಒಳ್ಳೆಯ ಉದ್ದೇಶದಿಂದ ಒಳ್ಳೆ ಕಾರ್ಯಕ್ಕಾಗಿ ಒಂದಷ್ಟು ಜನರ ಉಪಯೋಗಕ್ಕೆ ಉಪಯೋಗಿಸಬೇಕು ಎಂದು.

ಬೆಂಗಳೂರಿನ ಸುತ್ತಮುತ್ತ ಇರುವ ಸರ್ಕಾರಿ ಕಾಲೇಜು ಅಥವಾ ಸ್ಕೂಲ್ ಇವರಿಗೆ ನೆರವಿನ ಹಸ್ತ ಯಾವಾಗಲೂ ಇರುತ್ತೆ ,ಅದೇ ಸ್ವಲ್ಪ ದೂರದ ಊರಿನಲ್ಲಿ, ತುಂಬಾ ಹಳ್ಳಿಗಾಡು ಪ್ರದೇಶದಲ್ಲಿ ಇರುವ ಸರ್ಕಾರಿ ಶಾಲೆಗಳು ಅವಕಾಶ ವಂಚಿತರಾಗಿರುತ್ತಾರೆ ಆದ ಕಾರಣ ನಾವು ಚಿತ್ರದುರ್ಗ ಜಿಲ್ಲೆಯ ಎರಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು.

ಸರಿ ಅಂದುಕೊಂಡ ಹಾಗೆ 3 ಕಂಪ್ಯೂಟರ್ಗಳನ್ನು ಬೆಂಗಳೂರಿನ ಎಸ್ ಪಿ ರೋಡಿನಲ್ಲಿ ತೆಗೆದುಕೊಂಡಾಗಿತ್ತು , ಇದೊಂದು ಒಳ್ಳೆ ಉದ್ದೇಶ ಎಂದು ಇನ್ನು ಕೆಲವು ನಮ್ಮ ಸ್ನೇಹಿತರು ಜೊತೆ ಸೇರಿ ಎರಡು ಶಾಲೆಗಳಿಗೆ ಬೇಕಾಗುವ ಕೆಲವೊಂದು ಕ್ರೀಡಾ ಸಾಮಗ್ರಿಗಳನ್ನು, ಬ್ಯಾಟ್ಮಿಟನ್, football, volleyball, ಹೀಗೆ ಕೆಲವೊಂದು ಆಟ ಸಾಮಗ್ರಿಗಳನ್ನು ತೆಗೆದುಕೊಂಡರು. ಎಲ್ಲಾ ಆದ ಮೇಲೆ ಜೂನ್ 9 ಮತ್ತು 10 ನೇ ತಾರೀಖಿನಂದು ಚಿತ್ರದುರ್ಗ ಅಲ್ಲಿಗೆ ಹೋಗಿ, ಇವುಗಳನ್ನು ಶಾಲೆಗೆ ಕೊಡಬೇಕೆಂದು ತೀರ್ಮಾನ ಕೂಡ ಆಯಿತು.... ಇದರ ಜೊತೆಯಲ್ಲಿ ನಮ್ಮ ಕಂಪನಿಯ ಸಹೋದ್ಯೋಗಿ ಮಹೇಂದ್ರ ಎನ್ನುವವರ ಸ್ನೇಹಿತರು ಇಷ್ಟು ಒಳ್ಳೆ ಕಾರ್ಯ ಮಾಡುತ್ತಿದ್ದೀರಾ.. ಹೇಗೂ ಇವಾಗ ಸ್ಕೂಲ್ ಶುರುವಾಗಿದೆ , ನಮ್ಮ ಕಡೆಯಿಂದ ಪುಸ್ತಕ ಪೆನ್ನು ಪೆನ್ಸಿಲ್ ಅನ್ನು ನೀಡುತ್ತೇವೆ ಎಂದು ಮುಂದೆ ಬಂದರು. ಸರಿ ಒಳ್ಳೆಯದೇ ಆಯಿತು ಎಂದು ಅಂದುಕೊಂಡ ದಿನ ಅಂದರೆ ಜೂನ್ 9 ಬೆಳಿಗ್ಗೆ ಐದು ಗಂಟೆಗೆ ನಮ್ಮ 15 ಜನರ ತಂಡ ಬೆಂಗಳೂರಿನಿಂದ ಚಿತ್ರದುರ್ಗದ ಕಡೆಗೆ ಪ್ರಯಾಣ ಹೊರಟಿತು, ಹೊರಡುವ ದಿನ ಸಣ್ಣದಾದ ಜಿಟಿಜಿಟಿ ಮಳೆ ,ಮುಂಗಾರು ಶುರುವಾದ್ದರಿಂದ ಮಳೆ ಶುರುವಾಗಿತ್ತು, ಅಂದು ಶನಿವಾರ ಆದ್ದರಿಂದ ಶಾಲಾ ಮಕ್ಕಳು ನಮ್ಮ ಬರುವಿಕೆಯನ್ನು ಎದುರು ನೋಡುತ್ತಿದ್ದರು ನಾವೆಲ್ಲಾ ಸೇರಿ ಶಾಲೆಗೆ ಹೋಗುವಷ್ಟರಲ್ಲಿ ಹತ್ತು ಗಂಟೆ ಆಗಿತ್ತು , ಆ ಸಣ್ಣದಾಗಿ ಬೀಳುತ್ತಿರುವ ಜಟಿ ಜಟಿ ಮಳೆಯಲ್ಲೂ ವಿದ್ಯಾರ್ಥಿಗಳ ಉತ್ಸಾಹ ಕಿಂಚಿತ್ತು ಕಮ್ಮಿ ಆಗಿರಲಿಲ್ಲ .... ಆ ಶಾಲೆಯ ಉಪಾಧ್ಯ ವೃಂದ ಒಂದು ಸಣ್ಣ ಕಾರ್ಯಕ್ರಮವನ್ನು ಏರ್ಪಡಿಸಿ, ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಿದ್ದರು.. ಸಣ್ಣದಾಗಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಲ್ಲಿ ಎಲ್ಲಾ ಮಕ್ಕಳು ಕೂತಿದ್ದರು ಇಂತಹ ಉತ್ಸಾಹ ಆ ಮಕ್ಕಳಲ್ಲಿ ಹಾಗು ಶಾಲೆಯ ಉಪಾಧ್ಯಾಯರಿಗೂ ಕೂಡ ನಾವಿಲ್ಲಿ ಕಂಪ್ಯೂಟರ್ ಕೊಡುತ್ತಿರುವ ವಿಷಯ ತುಂಬಾ ಸಂತೋಷ ತಂದಿತ್ತು. ಕಂಪ್ಯೂಟರ್ ಅನ್ನು ಇಡುವುದಕ್ಕಾಗಿ ಒಂದು ರೂಮಿನಲ್ಲಿ ಅಚ್ಚುಕಟ್ಟಾದ ಜಾಗವನ್ನು ರೆಡಿ ಮಾಡಿಕೊಂಡಿದ್ದರು, ಅಂತರ ಒಂದು ಸಣ್ಣ ಕಾರ್ಯಕ್ರಮ, ಶಾಲೆಯ ಮುಖ್ಯೋಪಾಧ್ಯಾಯರು ,ಆಡಳಿತ ಮಂಡಳಿ ಕೆಲವೊಂದು ಮಾತುಗಳನ್ನಾಡಿ ನಮ್ಮ ಕಾರ್ಯವನ್ನು ಶ್ಲಾಘಿಸಿ.. ಚಿಕ್ಕ ಮಕ್ಕಳೆಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು ... ಅಲ್ಲಿಗೆ ಬರುತ್ತಿರುವ ಮಕ್ಕಳೆಲ್ಲರೂ ಸ್ಲಮ್ ಹಾಗೂ ಅತಿ ಹಿಂದುಳಿದ ರೈತರ ಹಾಗೂ ಬಡವರ ಮಕ್ಕಳಾಗಿದ್ದರು... ನಮ್ಮ ಮಕ್ಕಳಿಗೆ ಕಂಪ್ಯೂಟರ್ ಲ್ಯಾಪ್ಟಾಪ್ ಎಂದರೆ ಎಲ್ಲಾ ಗೊತ್ತಿರುತ್ತದೆ ಆದರೆ ಆ ಮಕ್ಕಳು ಕಂಪ್ಯೂಟರ್ ನೋಡಿದ್ದೇ ಒಂದು ಖುಷಿ , ಆ ಖುಷಿಯನ್ನು ಅವರ ಕಣ್ಣುಗಳಲ್ಲಿ ನೋಡಬೇಕಿತ್ತು ಎಂತಾ ಆನಂದ!!!!! ಅದೇ ರೀತಿ ನಾವು ತಂದಿದ್ದ ಪುಸ್ತಕ ಹಾಗೂ ಕ್ರೀಡೆಯ ಆಟ ಸಾಮಾನುಗಳನ್ನು ಅಲ್ಲೇ ಎಲ್ಲರಿಗೂ ಹಂಚಿದೆವು ಆಗ ನೋಡಬೇಕಿತ್ತು ಅವರ ಆನಂದ !!!! ಒಂದು ಪುಸ್ತಕ ಒಂದು ಪೆನ್ಸಿಲ್ ರಬ್ಬರ್ ಸಿಕ್ಕಿದೆ ಎಂದು ದೊಡ್ಡ ವಿಷಯವಾಗಿತ್ತು .... ಸರಿ ಅಲ್ಲಿನ ಸ್ಕೂಲ್ ಇನ್ ಅವರ ಜೊತೆ ಸ್ವಲ್ಪ ಹೊತ್ತು ಕಳೆದು ಕಂಪ್ಯೂಟರನ್ನು ಜೋಡಿಸಿಕೊಟ್ಟು ಅದನ್ನು ಹೇಗೆ ಉಪಯೋಗಿಸಬೇಕು ಎಂದು ಹೇಳಿ ಅವರ ಜೊತೆ ಸ್ವಲ್ಪ ಹೊತ್ತು ಕಳೆದು ಇನ್ನೊಂದು ಪುಟ್ಟ ಹಳ್ಳಿಯ ಕಡೆ ನಮ್ಮ ಪಯಣ ಹೊರಟಿತು....




ಸಣ್ಣಗೆ ಸುರಿಯುತ್ತಿರುವ ಮಳೆಯಲ್ಲೂ ಕುಳಿತಿರುವ ಮಕ್ಕಳು 


ಶಾಲೆಯ ಮುಖ್ಯೋಪಾಧ್ಯಾಯರಿಂದ ಸಣ್ಣ ಭಾಷಣ 



ನಮ್ಮ ಕಂಪನಿಯ ಸಹದ್ಯೋಗಿ ಮಿತ್ರ ವೃಂದ 








ನಾವು ಕೊಟ್ಟ ಕಂಪ್ಯೂಟರ್ ಅನ್ನು ಉದ್ಘಾಟನೆ ಮಾಡುತ್ತಿರುವುದು 









ಚಿಕ್ಕ ಮಕ್ಕಳಿಂದ ದೇವರ ಹಾಡು......







ಪುಸ್ತಕ ಹಾಗು ಪೆನ್ಸಿಲ್ , ವಿತರಣೆ 








ಚಿಕ್ಕ ಮಕ್ಕಳ ಸಂತೋಷ ನೋಡಿ....





ಸಣ್ಣ ಮಳೆಯಲ್ಲೂ ಯಶಸ್ಹ್ವಿ ಅದ ನಮ್ಮ ಕಾರ್ಯಕ್ರಮ 














ನಮ್ಮ ಕಂಪನಿ ಸಹದ್ಯೋಗಿ ಮಿತ್ರರು.... 
















ಚಿತ್ರದುರ್ಗದಿಂದ ಒಂದಿಪ್ಪತ್ತು ಕಿಲೋಮೀಟರ್ ದೂರದಲ್ಲಿರುವ "ಚಿಕ್ಕ ರ ಗೊಲ್ಲ ಹಟ್ಟಿ "ಅಲ್ಲಿ ಒಂದು ಸ್ಕೂಲನ್ನು ಆಯ್ಕೆಮಾಡಿಕೊಂಡಿದ್ದು ಅಲ್ಲಿಗೆ ಹೋಗುವಷ್ಟರಲ್ಲಿ ಹನ್ನೆರಡು ಗಂಟೆ ಆಗಿತ್ತು ಅಲ್ಲೂ ಕೂಡ ಶಾಲಾ ಮಕ್ಕಳು ಹಾಗೂ ಅಧ್ಯಾಪಕ ವರ್ಗದವರು ನಮ್ಮ ಬರುವಿಕೆಗಾಗಿ ಕಾಯುತ್ತಿದ್ದರು, ಅಲ್ಲಿ ಕೂಡ ತುಂಬಾ ಮಳೆ ಪಾಪ ಅವರು ಕಾರ್ಯಕ್ರಮಕ್ಕೋಸ್ಕರ ಶಾಲಾ ಆವರಣದ ಮುಂಬಾಗ ಚೇರುಗಳನ್ನು ಹಾಕಿಸಿ ಕಾಯುತ್ತಿದ್ದರು ಆದರೆ ಮಳೆ ಅದಕ್ಕೆ ಆಸ್ಪದ ಕೊಡಲಿಲ್ಲ ...!! ಸರಿ ಎಂದು ಶಾಲೆಯ ಆವರಣದ ಒಳಗಡೆ ಇರುವ ಒಂದು ಪುಟ್ಟ ಕೊಠಡಿಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಿಸಿ ಅವರಿಗೆ ಸ್ವಲ್ಪ ಸಣ್ಣಪುಟ್ಟ ಆಟಗಳನ್ನು ಆಡಿಸಿ ಕಂಪ್ಯೂಟರ್ ಹಾಗೂ ತಂದಿದ್ದ ಪುಸ್ತಕ ಪೆನ್ನು ಪೆನ್ಸಿಲು ಗಳನ್ನು ಕೊಟ್ಟೆವು ಇಲ್ಲೂ ಕೂಡ ಆ ಪುಟ್ಟ ವಿದ್ಯಾರ್ಥಿಗಳಿಗೆ ಏನೂ ದೊಡ್ಡ ವಸ್ತು ಸಿಕ್ಕ ಖುಷಿ ಸಂಭ್ರಮ, ಆ ಒಂದು ಪುಸ್ತಕ ಪೆನ್ಸಿಲು ಅವರ ಮುಖದಲ್ಲಿ ಆ ರೀತಿಯ ಆನಂದವನ್ನುಂಟು ಮಾಡುತ್ತೆ ಎಂದು ನಾವು ನೋಡಿರಲಿಲ್ಲ ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಸಂತೋಷ ನನಗೆ ಈ ಕಲರ್ ಸಿಕ್ಕಿದೆ ಇನ್ನೊಂದು ಕಲರ್ ಸಿಕ್ಕಿದೆ ಎಂದು ಅವರವರೇ ಮಾತನಾಡಿಕೊಂಡು ಎಲ್ಲರಿಗೂ ತೋರಿಸುತ್ತಾ ಖುಷಿಪಡುತ್ತಿದ್ದರು... ಅದನ್ನು ನೋಡಿ ನಮ್ಮ ಕಣ್ಣುಗಳು ತೇವವಾದವು ..... ಇಲ್ಲಿ ಮಾಡಿದ ಇನ್ನೊಂದು ಒಳ್ಳೆಯ ಕೆಲಸವೆಂದರೆ 10 ಸಸಿಗಳನ್ನು ತೆಗೆದುಕೊಂಡು ಹೋಗಿದ್ದೆವು ನೇರಳೆ ಮರ, ಹೊಂಗೆ ಮರ, ಕಾಡು ಬಾದಾಮಿ, ಹೀಗೆ ಕೆಲವೊಂದು ಒಳ್ಳೆಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಕೂಡ.. ಅದನ್ನು ಶಾಲಾ ಆವರಣದಲ್ಲಿ ನಮ್ಮ ಸಹೋದ್ಯೋಗಿ ಮಿತ್ರರು ಎಲ್ಲರೂ ಸೇರಿ ಆ ಸಸಿಗಳನ್ನು ನೆಟ್ಟು ಮತ್ತೆ ಬಂದಾಗ ಇದು ದೊಡ್ಡ ಮರವಾಗಿ ಇರಬೇಕು ಎಂದು ಹೇಳಿ ಹೊರಟೆವು. ಅಲ್ಲಿನ ಶಾಲೆಯ ವತಿಯಿಂದ ನಮಗಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು ಸರ್ಕಾರಿ ಶಾಲೆಗಳಲ್ಲಿ ಸಿಗುವ ಮಧ್ಯಾಹ್ನದ ಊಟವೇ ನಮಗೂ ಇತ್ತು ತುಂಬಾ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದ್ದರು ಸರಿ ಎಲ್ಲರದು ಊಟ ಮಾಡಿ ಆಯಿತು ಹಾಗೇ ಸ್ವಲ್ಪ ಹೊತ್ತು ಅಲ್ಲೇ ಇದ್ದ ಚಿಕ್ಕ ಮೈದಾನದಲ್ಲಿ ನಮ್ಮ ಜೊತೆ ಬಂದಿದ್ದ ನಮ್ಮ ಸಹೋದ್ಯೋಗಿ ಮಿತ್ರರು ಹಳ್ಳಿ ಮಕ್ಕಳ ಜೊತೆ ಸೇರಿ ಸ್ವಲ್ಪ ಹೊತ್ತು ಕಬಡ್ಡಿ ಆಟ ಹಾಗೂ ಕೆಲವೊಂದು ಸಣ್ಣಪುಟ್ಟ ಆಟವನ್ನು ಆಡಿದೆವು... ಅಲ್ಲಿಂದ ಎಲ್ಲರನ್ನು ಬೀಳ್ಕೊಟ್ಟು ಹೊರಟಾಗ 3.0 ಘಂಟೆ ಆಗಿತ್ತು... ಅಲ್ಲಿಂದ ನೇರವಾಗಿ ಚಿತ್ರದುರ್ಗದ ವೀರ ಮದಕರಿ ನಾಯಕರ ಕಲ್ಲಿನ ಕೋಟೆಯೊಳಗೆ ಪ್ರವೇಶ ಮಾಡಿದೆವು ಒಟ್ಟಿನಲ್ಲಿ ಆ ಚಿಕ್ಕ ಚಿಕ್ಕ ಮಕ್ಕಳ ಮುಖದಲ್ಲಿ ನೋಡಿದ ಆನಂದವು ನಾವು ಬೆಂಗಳೂರಿನಿಂದ ಇಲ್ಲಿ ತನಕ ಬಂದಿದ್ದು ಸಾರ್ಥಕ ಎನಿಸಿತು.. ಹಾಗೆ ಒಂದು ಒಳ್ಳೆಯ ಕಾರ್ಯದಲ್ಲಿ ಕೈಜೋಡಿಸಿದ ಅನುಭವ ನಮ್ಮ 15 ಜನರ ತಂಡದಲ್ಲಿ ಮೂಡಿತ್ತು ....

ನಮ್ಮ ತಂಡದ ಸದಸ್ಯರು ಶೀಲಾ ಮತ್ತು ಶಿಲ್ಪ ಹಾಗೂ ಇವರ ಕುಟುಂಬದವರ ಸಹಕಾರ ಯಾವಾಗಲೂ ನೆನೆಯಬೇಕು.. ಅಂತಹ ಒಳ್ಳೆಯ ಸಹಕಾರವನ್ನು ಕುಟುಂಬದವರು ನಮಗೆಲ್ಲರಿಗೂ ಕಲ್ಪಿಸಿದ್ದರು ಇವರಿಗೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ..

ಸೂರಜ್, ಸುಮತಿ, ವಿಜಯ್, ಮಹೇಂದ್ರ ,ಅನಂತಶಯನ, ಉಮೇಶ್, ಗಂಗಾಧರ್ ಹಾಗು ಅವರ ಪತ್ನಿ ಸುಷ್ಮಾ ಹಾಗೆ ಮಹೇಂದ್ರ ಅವರ ಫ್ರೆಂಡ್ಸ್ ಎಲ್ಲರಿಗೂ ನನ್ನ ನಮನಗಳು.

ಒಂದು ಒಳ್ಳೆಯ ಕೆಲಸದಲ್ಲಿ ಭಾಗಿಯಾದ ಅನುಭವ ನಮ್ಮ ಗುಂಪಿನ ಸದಸ್ಯರು ತುಂಬ ಕುಷಿ ಪಟ್ಟರು.... ಇಂಥದ ಹತ್ತಾರು ಕಾರ್ಯಕ್ರಮಗಳು ಹೀಗೆ ನಡೆಯಲಿ ಎಂಬುದೇ ನಮ್ಮ ಎಲ್ಲರ ಆಶಯ..... 




















































































ಶಾಲೆಯ ಮಕ್ಕಳ ಜೊತೆ ನಾವು ಮಕ್ಕಳಾದ ಸಂಧರ್ಬ .



ಒಂದು ಚಿಕ್ಕ ಪುಸ್ತಕ, ಪೆನ್ನು ಪೆನ್ಸಿಲ್ ....... ಎಷ್ಟು ಕುಷಿ ಈ ಮಕ್ಕಳ ಮುಖದಲ್ಲಿ.... ನೀವೇ ನೋಡಿ. ನಮಗಂತೂ ಕಣ್ಣಿ ನಲ್ಲಿ ನೀರು ಬಂತು. ನಮ್ಮ ಮಕ್ಕಳು ಒಂದು ವಾರದಲ್ಲಿ ಎಷ್ಟು ಪೆನ್ ಮತ್ತು ಪೆನ್ಸಿಲ್ ಗಳನ್ನೂ ಕಳೆದುಕೊಂಡು ಬರುತ್ತಾರೆ... ಅವರಿಗೆ ಬೆಲೆ ಏನು ಎಂಬುದೇ ಗೊತ್ತಿಲ್ಲ....... ಇ ಹಳ್ಳಿ ಮಕ್ಕಳನ್ನು ನೋಡಿ......... 









ಫೋಟೋ ಕೃಪೆ ( ಸುಮತಿ , ಸೂರಜ್, ಅನಂತ, ಗಂಗಾಧರ, ಮಹೇಂದ್ರ, ಗುರುಪ್ರಸಾದ್ )


ಜೈ ಹಿಂದ್ .... ಜೈ ಕರ್ನಾಟಕ !!!!!