Monday, June 3, 2024

ಗೀಜಗದ ಸೋಜಿಗ...

 ಗೀಜಗದ ಸೋಜಿಗ... 



ಮುಂಗಾರು ಶುರುವಾಯಿತು ಎಂದರೆ ಸಾಕು, ಬಿದ್ದ ಮಳೆಗೆ... ಇಳಗೆ ಜೀವ ಕಳೆ ಬರುತ್ತದೆ ಹಸಿರು ಕಂಗೊಳಿಸುತ್ತ ಇದೆ... ಹಳ್ಳ ಕೊಳ್ಳಗಳು ಭರ್ತಿಯಾಗಿ ಜೀವ ಜಲ.. ಜೀವಸಂಕುಲ ಸಮೃದ್ಧವಾಗಿ ಬೆಳೆಯುತ್ತದೆ..

ನನಗೆ ಪ್ರತಿವರ್ಷ ಈ ಗೀಜಗ ಗೂಡನ್ನು ನಿರ್ಮಿಸುವ ಸೊಬಗು ನೋಡುವುದೇ ಒಂದು ಖುಷಿ...... ಈ ರೀತಿ ಗೂಡು ಕಟ್ಟಲು ಯಾರು ಹೇಳಿಕೊಟ್ಟಿದ್ದಾರೋ ಏನೋ.... ಜೂನ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ತಾಳೆ ಗರಿಗಳ ಪುಟ್ಟ ಎಲೆಗಳನ್ನು ತಾಳ್ಮೆಯಿಂದ ಒಂದೊಂದಾಗಿ ಸೀಳಿಕೊಂಡು ಬಂದು... ಗೂಡನ್ನು ನಿರ್ಮಾಣ ಮಾಡುತ್ತವೆ.... ಗಂಡು ಹಕ್ಕಿ ಅರ್ಧ ಕಟ್ಟಿದ ಗೂಡನ್ನು .. ಅದರ ಸಂಗಾತಿ ಜೊತೆಯಾಗಿ ಸಿಕ್ಕಮೇಲೆ ಹೆಣ್ಣು ಮತ್ತು ಗಂಡು ಎರಡು ಕೂಡಿ ಗೂಡನ್ನು ಸಂಪೂರ್ಣಗೊಳಿಸುತ್ತವೆ.... ಪ್ರತಿ ವರ್ಷ ಇದರ ಆಟೋಟ ನೋಡಿಕೊಂಡು ಶುರುವಿನಿಂದ ಹಿಡಿದು ಮುಗಿಸುವವರೆಗೂ ಇದರ ಗೂಡು ಕಟ್ಟುವ ಅನುಭವ ಹತ್ತಿರದಿಂದ ನೋಡಿದ್ದೇನೆ.. ಈ ಪುಟ್ಟ ಪಕ್ಷಿಗಳನ್ನು ಇಂಜಿನಿಯರ್ ಆಫ್ ಬರ್ಡ್ಸ್ ಅಂತ ಕರೀಬಹುದು.. ಇದು ಗುಂಪಾಗಿ ಕಾಲೋನಿ ಗಳಲ್ಲಿ ಗೂಡನ್ನು ನಿರ್ಮಿಸುತ್ತವೆ.... ಗೂಡನ್ನು ನಿರ್ಮಿಸುವಾಗ ಇದರ ಗಲಿಬಿಲಿ ಸಡಗರ ಸಂಭ್ರಮ ನೋಡುವುದೇ ಒಂದು ಆನಂದ.... ಅದರಲ್ಲೂ ಹೆಣ್ಣು ಹಕ್ಕಿ ಬಂದಾಗ ತಾನು ನಿರ್ಮಿಸಿರುವ ಗೂಡನ್ನು ತೋರಿಸಲು ಎಲ್ಲಾ ಗಂಡು ಹಕ್ಕಿಗಳು ಒಟ್ಟೊಟ್ಟಾಗಿ ಕರೆದು ಕರೆದು ತೋರಿಸುತ್ತವೆ.. ಆ ಚಿಲಿಪಿಲಿ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಸಾಮಾನ್ಯವಾಗಿ ಈಚಲು ಮರ.. ಜಾಲಿ ಮರ ಮತ್ತು ನೀರು ಇರುವ ಕಡೆ ಪ್ರಶಸ್ತವಾದ ಜಾಗವನ್ನು ಆರಿಸಿ ಬೇರೆ ಯಾವ ತೊಂದರೆಗಳು ಇಲ್ಲ ಎಂದ ಮೇಲೆ ಗೂಡು ಕಟ್ಟಲು ಶುರುಮಾಡುತ್ತದೆ. ಇದರ ಮುಖ್ಯ ಶತ್ರು ಎಂದರೆ ಹಾವು ಮತ್ತು ಕೆಂಭೂತ (coucal) ಅಥವಾ ಮಟ ಪಕ್ಷಿಗಳು (Roufas treepie)

ಹಳ್ಳಿಗಳ ಕಡೆ ಹೊಲ ಗದ್ದೆ ಇವುಗಳ ಸಮೀಪ ಚಿಕ್ಕ ಹೊಂಡ ಅಥವಾ ಕೆರೆಗಳ ಬದುಗಳಲ್ಲಿ ಇವುಗಳ ಗೂಡುಗಳನ್ನು ಕಾಣಬಹುದು.  

ನಾನು ಪ್ರತಿ ಸಾರಿ ಹೋಗುವ ಇದರ ಗೂಡು ಕಟ್ಟುವ ಜಾಗ ಈಗ ಸಂಪೂರ್ಣವಾಗಿ ಮಾಯವಾಗಿ ಹೋಗಿದೆ ಲೇಔಟ್.. ನಗರೀಕರಣ ಹೆಸರಿನಲ್ಲಿ ಅಲ್ಲಿರುವ ಮರಗಳನ್ನು ಕಡಿದು ಸಣ್ಣ ಕೆರೆಗಳನ್ನು ಮುಚ್ಚಿ ಹಾಳು ಮಾಡಿಟ್ಟಿದ್ದಾರೆ..... ಪಾಪ ಈ ಪುಟ್ಟ ಪಕ್ಷಿಗಳ ಕೂಗು ಯಾರಿಗೂ ಕೇಳಿಸುವುದಿಲ್ಲ.... ಮತ್ತೆಲ್ಲಿ ಜಾಗ ಹುಡುಕಿಕೊಂಡು ಹೋಗಿರುತ್ತವೋ ಗೊತ್ತಿಲ್ಲ...

ಈ ವರ್ಷದ ಗೀಜಗನ ಸೋಜಿಗ ನೋಡುವುದಕ್ಕೆ ಬೇರೆ ಜಾಗ ಹುಡುಕಿಕೊಂಡು ಹೋಗಬೇಕು..

ಗುರುಪ್ರಸಾದ್.