Sunday, April 11, 2021

ಪರಿಸರ ಜಾಗೃತಿ ಮತ್ತು ಮಕ್ಕಳು



ಪರಿಸರ, ಪ್ರಾಣಿಗಳು, ಪಕ್ಷಿಗಳು, ಮರಗಿಡಗಳು, ಹಳ್ಳಕೊಳ್ಳಗಳು, ಇದರ ಒಡನಾಟದೊಂದಿಗೆ ಮಕ್ಕಳು ಬೆಳೆಯಬೇಕೆಂದು ನನ್ನ ಅನಿಸಿಕೆ. ಹಾಗೆ ಸುಮ್ಮನೆ ಲ್ಯಾಪ್ಟಾಪ್ನಲ್ಲಿ, ಮೊಬೈಲ್ನಲ್ಲಿ, ಅಥವಾ ಒಂದು ಪ್ರೆಸೆಂಟೇಶನ್ ನಲ್ಲಿ ಇದೇ ರೀತಿ ಪಕ್ಷಿಗಳು, ಈ ರೀತಿ ಮರಗಳಿರುತ್ತವೆ ಎಂದು ಹೇಳಿದರೆ ಚಿಕ್ಕಮಕ್ಕಳಿಗೆ ಅಷ್ಟು ಚೆನ್ನಾಗಿ ಗೊತ್ತಾಗುವುದು ಇಲ್ಲ.

ಹಳ್ಳಿ ಕಡೆ ಇರುವ ಮಕ್ಕಳು ಪರಿಸರ ಜೊತೆಜೊತೆಗೆ ಬೆಳೆಯುತ್ತಾರೆ. ಅದು ಸ್ವಲ್ಪ ಕಮ್ಮಿ ಆಗಿದೆ ಅಂತ ಅನ್ನಿ. ನಗರ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಪಾರ್ಕ್ ಅಥವಾ ಚೆನ್ನಾಗಿ ಅಲಂಕಾರ ಮಾಡಿ ಸಿಂಗರಿಸಿಕೊಂಡಿರುವ ಬರೀ ಚರಂಡಿ ನೀರು ತುಂಬಿಕೊಂಡಿರುವ ಕೆರೆಗಳು ಕಾಣಸಿಗುತ್ತದೆ... ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆದಾಡಲು ಟೈಲ್ಸ್ ದಾರಿ.. ಕುಳಿತುಕೊಳ್ಳಲು ತರತರದ ಬೆಂಚುಗಳು... ಒಟ್ಟಿನಲ್ಲಿ ಕೆರೆಯಲ್ಲಿ ನೀರಿಲ್ಲದಿದ್ದರೂ ಅಥವಾ ಗಲೀಜು ನೀರಿದ್ದರೂ ನೋಡಲು ಮಾತ್ರ.. ಚಂದದ ಕೆರೆಗಳು. ನಾನು ನೋಡಿದ ಪ್ರಕಾರ ಬೆಂಗಳೂರಿನ ತುಂಬಾ ಕೆರೆಗಳ ಪರಿಸ್ಥಿತಿ ಇದೇ ರೀತಿ ಇದೆ. ಎಲ್ಲೆಲ್ಲಿ ಹಣದ ಆಸೆಗೋಸ್ಕರ ಇರುವ ಜಲಮೂಲಗಳನ್ನು ನಾಶಮಾಡಿ ನಾಮಕಾವಸ್ಥೆಗೆ ಇರುವ ಕೆರೆಗೆ ಸುಖಾಸುಮ್ಮನೆ ಖರ್ಚು ಮಾಡಿ ಇನ್ನು ಹಾಳುಮಾಡಿದ್ದಾರೆ.

ಇದೇ ರೀತಿ ಪಾರ್ಕುಗಳು ಕೂಡ ಇರೋದ್ರಲ್ಲಿ ಕೆಲವೊಂದು ಪಾರ್ಕುಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಅಷ್ಟೇ.

ಬಿಡಿ ನಾನು ಇವತ್ತು ಹೇಳಹೊರಟಿರುವುದು ಮಕ್ಕಳಲ್ಲಿ ಈಗಿನಿಂದಲೇ ಪರಿಸರದ ಬಗ್ಗೆ ಅದನ್ನು ಉಳಿಸಿಕೊಳ್ಳುವ ಬಗ್ಗೆ ವಾಸ್ತವವಾಗಿ ತೋರಿಸಿ ತಿಳಿಸಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.. ಇಲ್ಲದಿದ್ದರೆ ಕೆಲವೊಂದು ಅಪರೂಪ ಜಾತಿಯ ಮರಗಳನ್ನು ಪ್ರಾಣಿ-ಪಕ್ಷಿಗಳನ್ನು ಬರಿ ಕಂಪ್ಯೂಟರ್, ಮೊಬೈಲ್ ನಲ್ಲಿ ಫೋಟೋಗಳನ್ನು ನೋಡಬೇಕು ಅಷ್ಟೇ.

ನಾನು ಇರುವುದು ಬೆಂಗಳೂರು ಯೂನಿವರ್ಸಿಟಿ ಹಿಂಭಾಗ.. ಜ್ಞಾನಭಾರತಿ ಎಂಬ ಬಡಾವಣೆ ನಮ್ಮದು.. ಒಂದು ಖುಷಿಪಡುವ ವಿಚಾರವೆಂದರೆ ಸುಮಾರು 1200 ಎಕರೆ ಪ್ರದೇಶದಲ್ಲಿ ಸುಂದರವಾಗಿ ಇರುವ ನಮ್ಮ ಯುನಿವರ್ಸಿಟಿ ಕ್ಯಾಂಪಸ್. ಇದು ಒಂದು ಕಿರು ಅರಣ್ಯ ಪ್ರದೇಶವೆಂದು ಕರೆಯಲ್ಪಡುತ್ತದೆ.. ಅಧಿಕಾರದಾಸೆ ಹಾಗೂ ಹಣದಾಸೆ ಗೋಸ್ಕರ 1200 ಎಕರೆ ಈಗ ಅರ್ಧಕ್ಕರ್ಧ ನಾಶವಾಗಿದೆ. ವಿನಾಕಾರಣ ಅನಗತ್ಯ ಕಟ್ಟಡಗಳು, ಚೆನ್ನಾಗಿ ಬೆಳೆದಿರುವ ಮರಗಿಡಗಳನ್ನು ನೆಲಸಮ ಮಾಡಿ ತಲೆಯೆತ್ತುತ್ತಿರುವ ಕಟ್ಟಡಗಳು.. ನಮ್ಮ ಆಕ್ಸಿಜನ್ ಬ್ಯಾಂಕ್ ಆದ ಕಿರು ಅರಣ್ಯ ನಾಶಕ್ಕೆ ಮುನ್ನುಡಿ ಬರೆದಿದೆ..

ಪರಿಸರಪ್ರಿಯರ ಹಾಗೂ ಇಲ್ಲಿರುವ ಕೆಲವರು ಮುತುವರ್ಜಿಯಿಂದ ಅಳಿದುಳಿದಿರುವ ಮರಗಳನ್ನು ಹೋರಾಟ ಮಾಡಿ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಎದುರು ನಿಂತಿದೆ..

ನಮ್ಮ ರೋಡಿನಲ್ಲಿರುವ ಮಕ್ಕಳನ್ನು ಕರೆದುಕೊಂಡು ಸಾಧ್ಯವಾದಾಗಲೆಲ್ಲ ಈ ಪರಿಸರಕ್ಕೆ ಕರೆದುಕೊಂಡು ಹೋಗುತ್ತೇನೆ.. ಕಣ್ಣ ಮುಂದೆಯೇ ಹಾರಿಹೋಗುವ ನವಿಲುಗಳು, ರೆಕ್ಕೆಬಿಚ್ಚಿ ಹಾರಾಡುವ ತರತರದ ಹಕ್ಕಿಗಳು. ವಲಸೆ ಹಕ್ಕಿಗಳು, ಹಾವು.. ಮುಂಗುಸಿ... ಉದುರಿದ ಎಲೆಗಳು.. ಚಿಗುರುತ್ತಿರುವ ಹೊಸ ಹೊಸ ಎಲೆಗಳು.. ಹಸಿರು ಮರಗಳು... ಗಿಡಗಳು.. ಇವುಗಳನ್ನು ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಅವರು ನೋಡಿ ಅನುಭವಿಸಿ ಕೇಳುವಂತ ಪ್ರಶ್ನೆಗಳು ತುಂಬಾ ಖುಷಿ ಕೊಡುತ್ತದೆ.. ಒಂದು ಪಕ್ಷಿ ಇನ್ನೊಂದು ಪಕ್ಷಿಯ ಆಹಾರವನ್ನು ಕಿತ್ತುಕೊಳ್ಳಲು ಸೆಣಸಾಡುತ್ತಾ ಇದ್ದ ರೀತಿ.. ಕಾಗೆ... ಹದ್ದು... ತಮ್ಮ ಗೂಡು ಕಟ್ಟಿಕೊಳ್ಳಲು ಮರದ ಚಿಕ್ಕ ಚಿಕ್ಕ ಕಡ್ಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ನೋಟ.. ಹಕ್ಕಿಗಳು ತಮ್ಮ ಮರಿಗಳಿಗೆ ಆಹಾರವನ್ನು ತಿನ್ನಿಸುತ್ತಿದ್ದ ರೀತಿ... ಇದೆಲ್ಲವನ್ನು ನನ್ನ ಮಕ್ಕಳು ಹಾಗೂ ನಮ್ಮ ರೋಡಿನ ಮಕ್ಕಳೆಲ್ಲ ಖುಷಿಯಿಂದ ಆನಂದಿಸಿ ಪ್ರಶ್ನೆಗಳನ್ನು ಕೇಳುತ್ತಾ ಪರಿಸರದ ಪಾಠವನ್ನು ಕಲಿತರು..